ಮಣಿಪಾಲ : ಮಣಿಪಾಲದ ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ದಿನಾಂಕ 1.04.2025ರಂದು ಆರೋಗ್ಯ ರಕ್ಷಣೆ, ಪೋಷಣೆ ಮತ್ತು ಸಾಮಾನ್ಯ ಆರೈಕೆಯ ಕುರಿತು ಕಾರ್ಯಾಗಾರವನ್ನು ಮಾಹೆಯ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ನ ಅಸೋಸಿಯೇಟ್ ಪ್ರೊಫೆಸರ್ ಶ್ರೀಮತಿ ಸುಲೋಚನಾ ಬಿ ಅವರು ನಡೆಸಿಕೊಟ್ಟರು.
ಮಕ್ಕಳ ಆರೋಗ್ಯವು ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಮಾತ್ರವಲ್ಲದೆ ಸಾಮಾಜಿಕ ಅಭಿವೃದ್ಧಿಯನ್ನೂ ಒಳಗೊಂಡಿದೆ. ಚಿಕ್ಕ ವಯಸ್ಸಿನಿಂದಲೂ ಮಕ್ಕಳಲ್ಲಿ ಬೊಜ್ಜು ಮತ್ತು ಆಯಾಸಕ್ಕೆ ಪ್ರಮುಖ ಕಾರಣವಾಗಿರುವ ಕ್ಯಾಲೋರಿ ಭರಿತ ಆಹಾರಕ್ಕಿಂತ ಮಕ್ಕಳ ಆಹಾರದಲ್ಲಿ ಪೌಷ್ಟಿಕ ಆಹಾರದ ಅತ್ಯಗತ್ಯತೆಯನ್ನು ವಿವರಿಸಿದರು. ಮಕ್ಕಳು ಬೆಳೆಯುವ ಪರಿಸರ, ಅವರ ಸುತ್ತಮುತ್ತಲಿನಲ್ಲಿ ಅನ್ವೇಷಣೆ, ಸಾಮಾಜಿಕ ಅರಿವು ಮತ್ತು ಭಾಷಾ ಕೌಶಲ್ಯಗಳನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದರು.

ದೈಹಿಕ ಬೆಳವಣಿಗೆಗೆ ಹೊರಾಂಗಣ ಆಟಗಳ ಜೊತೆಗೆ ರಚನಾತ್ಮಕ, ಗುಂಪು ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಇವು ಸಾಮಾಜಿಕ ಸಂವಹನವನ್ನು ಸಕ್ರಿಯಗೊಳಿಸುತ್ತವೆ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ವೈಯಕ್ತಿಕ ನೈರ್ಮಲ್ಯವನ್ನು ಕಲಿಸಬೇಕು. ಅಪಘಾತ ಮತ್ತು ಗಾಯಕ್ಕೆ ಮೊದಲ ಪ್ರತಿಕ್ರಿಯೆಯಾಗಿ ಮಕ್ಕಳಿಗೆ ಮಾಡಬಹುದಾದ ಪ್ರಥಮ ಚಿಕಿತ್ಸೆಯನ್ನು ಪ್ರದರ್ಶಿಸಿದರು.

ಗಾಯಗಳು ಹೇಗೆ ವಿಭಿನ್ನ ರೀತಿಯಲ್ಲಿ ಉಂಟಾಗುತ್ತವೆ ಮತ್ತು ರಕ್ತಸ್ರಾವವನ್ನು ತಡೆಗಟ್ಟುವ, ಬಾಲ್ಯದಲ್ಲಿಯೇ ಮಕ್ಕಳನ್ನು ಆರೋಗ್ಯವಾಗಿಡುವಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಲಾಯಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯನ್ನು ಶ್ರೀಮತಿ ಚಂದ್ರಕಲಾ ಸ್ವಾಗತಿಸಿ, ಮತ್ತು ಪ್ರಾಂಶುಪಾಲರಾದ ಸುನಿತಾರವರು ಧನ್ಯವಾದ ಸಮರ್ಪಿಸಿದರು.












