ಉಡುಪಿ: ಮಣಿಪಾಲ ನಗರ ವ್ಯಾಪ್ತಿಯಲ್ಲಿ ಒಳಚರಂಡಿಗೆ ಹೋಟೆಲ್, ಅಪಾರ್ಟ್ ಮೆಂಟ್ ಗಳಿಂದ ಕೊಳಚೆ ನೀರು ಬಿಡಲಾಗುತ್ತಿದ್ದು, ಈಗಾಗಲೇ ಅಂತಹ ಹೋಟೆಲ್, ಅಪಾರ್ಟ್ ಮೆಂಟ್ ಗಳಿಗೆ ನೋಟಿಸ್ ಜಾರಿಗೊಳಿಸಿ ತಲಾ 25 ಸಾವಿರ ದಂಡ ವಿಧಿಸಲಾಗಿದೆ. ಇದೇ ರೀತಿ ಕೊಳಚೆ ನೀರು ಬಿಡುವುದನ್ನು ಮುಂದುವರಿದರೆ ನೀರಿನ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ನಗರಸಭೆಯ ಸಹಾಯಕ ಅಭಿಯಂತರ ದುರ್ಗಾಪ್ರಸಾದ್ ತಿಳಿಸಿದರು.
ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಅಶೋಕ್ ನಾಯ್ಕ್ ಅವರು, ಮಣಿಪಾಲ ನಗರದಲ್ಲಿ ಹೋಟೆಲ್, ಅಪಾರ್ಟ್ ಮೆಂಟ್ ಗಳು ಒಳಚರಂಡಿಗೆ ಕೊಳಚೆ ನೀರು ಬಿಡುತ್ತಿದ್ದು, ಇದರ ಪರಿಣಾಮ 400ಕ್ಕೂ ಅಧಿಕ ಬಾವಿಗಳ ನೀರು ಕಲುಷಿತಗೊಂಡಿದೆ. ಇದನ್ನು ಅಧ್ಯಕ್ಷರೇ ಖುದ್ದಾಗಿ ಪರಿಶೀಲನೆ ನಡೆಸಬೇಕು. ಒಳಚರಂಡಿಗೆ ಕೊಳಚೆ ನೀರು ಬಿಡುವ ಹೋಟೆಲ್, ಅಪಾರ್ಟ್ ಮೆಂಟ್ ಗಳ ಟ್ರೇಡ್ ಲೈಸನ್ಸ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯೆಗೆ ಎಸ್ಪಿಯಿಂದ ಅಗೌರವ: ಕ್ಷಮೆಕೋರುವಂತೆ ಒತ್ತಾಯ
ಮಣಿಪಾಲದ ಮಣ್ಣಪಲ್ಲ ಕೆರೆಯ ಪರಿಶೀಲನೆಗೆ ಜಿಲ್ಲಾಧಿಕಾರಿ ಭೇಟಿಕೊಟ್ಟ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅವರು ನನ್ನನ್ನು ಅಗೌರಯುತವಾಗಿ ನಡೆಸಿಕೊಂಡಿದ್ದಾರೆ. ಅನೈತಿಕ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳದ ಎಸ್ಪಿ, ಜನಪ್ರತಿನಿಧಿಗಳಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯೆ ಕಲ್ಪನಾ ಸುಧಾಮ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಯಶ್ ಪಾಲ್ ಸುವರ್ಣ ಅವರು, ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲ ಪಾರ್ಕ್, ಮೈದಾನ, ಕೆರೆಯ ನಿರ್ವಹಣೆಯ ಹೊಣೆಯನ್ನು ನಗರಸಭೆಗೆ ಕೊಡಬೇಕು. ಇದರಿಂದ ಕೇಂದ್ರ ಸರಕಾರದ ನೇರ ಅನುದಾನ ಪಡೆಯಲು ಸಾಧ್ಯವಾಗುತ್ತದೆ. ಮಣ್ಣಪಲ್ಲ ಕೆರೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವುದಕ್ಕೆ ನಮ್ಮ ವಿರೋಧವಿದೆ. ಆದರೆ, ಸಿಎಸ್ ಆರ್ ಫಂಡ್ ನಲ್ಲಿ ಅಭಿವೃದ್ಧಿ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ ಎಂದರು.
ನಗರಸಭಾ ಸದಸ್ಯರನ್ನು ಅಗೌರವ ತೋರಿದ ಪೊಲೀಸ್ ಇಲಾಖೆ ಕ್ಷಮೆ ಕೋರಬೇಕು. ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲು ಅವರು ಸೂಚನೆ ನೀಡಿದರು.
ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ಮಳೆಗಾಲ ಆರಂಭ ಆಗುತ್ತಿದೆ. ಮುಂಜಾಗೃತ ಕ್ರಮವಾಗಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳ ಗೆಲ್ಲುಗಳನ್ನು ಕಡಿಯಬೇಕು. ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ತೋಡುಗಳ ಹೂಳೆತ್ತಬೇಕು. ಡಿವೈಡರ್ ಗಳಿಗೆ ಹಾಕಿರುವ ಹೊರ್ಡಿಂಗ್ಸ್ ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಪರಿಸರ ಅಭಿಯಂತರೆ ಸ್ನೇಹ ಅವರು, ಈಗಾಗಲೇ 50 ಮಂದಿ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಿದ್ದೇವೆ. ಅವರು ಚರಂಡಿ ತೋಡುಗಳ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಡಿವಿಜನ್ ಗೆ 15 ಮಂದಿ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.












