ಮಂಗಳೂರು: SSLC ವಿದ್ಯಾರ್ಥಿನಿಗೆ ಲೈಂಕಿಕ ದೌರ್ಜನ್ಯವೆಸಗಿದ ಪ್ರಕರಣ; ಆರೋಪಿಗೆ 5 ವರ್ಷ ಸಜೆ-ನ್ಯಾಯಾಲಯ ತೀರ್ಪು

ಮಂಗಳೂರು: ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿನಿಗೆ ಲೈಂಕಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿಆರೋಪಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1 (ಪೋಕ್ಸೋ ನ್ಯಾಯಾಲಯ) ಶಿಕ್ಷೆ ವಿಧಿಸಿ ತೀರ್ಪು ನೀಡಿರುವ ಘಟನೆ ವರದಿಯಾಗಿದೆ.

ಮೂಡುಬಿದಿರೆ ಪಡುಮಾರ್ನಾಡು ಕೆಸರುಗದ್ದೆ ನಿವಾಸಿ ಆಸಿಫ್ (43) ಶಿಕ್ಷೆಗೊಳಗಾದ ಆರೋಪಿ.

ಆಸಿಫ್‌ಗೆ ಐಪಿಸಿ-341 ರಡಿ 1 ತಿಂಗಳ ಸಾದಾ ಸಜೆ, ಐಪಿಸಿ 354ರಡಿ 5ವರ್ಷ ಸಾದಾ ಸಜೆ ಮತ್ತು 10ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ, ಐಪಿಸಿ 323ರಡಿ 1ವರ್ಷ ಸಾದಾ ಸಜೆ, ಸೆಕ್ಷನ್ 12ಪೋಕ್ಸೋದಡಿ 3 ವರ್ಷ ಸಾದಾ ಸಜೆ ಹಾಗೂ 10ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದ ವಿವರ:

2019ರ ಫೆ.10ರಂದು ಸಂಜೆ ಮಾರ್ಪಾಡಿ ಜೈನ್‌ಪೇಟೆ ಸಮೀಪದ ಹೈಸ್ಕೂಲೊಂದರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸ್ಪೆಷಲ್ ಕ್ಲಾಸ್ ಮುಗಿಸಿ ತನ್ನ ಸಹಪಾಠಿ ಜತೆ ನಿಂತಿದ್ದಳು. ಈ ಸಂದರ್ಭ ವಿದ್ಯಾರ್ಥಿನಿಯ ತಾಯಿ ನೆರೆಮನೆಯ ಯುವಕನ ಜತೆ ತನ್ನ ಮಗಳನ್ನು ಬೈಕ್‌ನಲ್ಲಿ ಕರೆದುಕೊಂಡು ಬರಲು ಹೇಳಿದ ಕಾರಣ ಆತ ಬೈಕ್‌ನಲ್ಲಿ ಬಂದು ವಿದ್ಯಾರ್ಥಿನಿ ಬಳಿ ನಿಲ್ಲಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಮತ್ತು ಆಕೆಯ ಸಹಪಾಠಿ ಬೈಕ್‌ನಲ್ಲಿ ತೆರಳಲು ಅಣಿಯಾಗುತ್ತಿದ್ದಾಗ ವಿದ್ಯಾರ್ಥಿನಿಯ ದೂರದ ಸಂಬಂಧಿ ಆರೋಪಿ ಆಸಿಫ್ ತಡೆದು ನಿಲ್ಲಿಸಿ , ಬೈದು ,ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದು ಮಾನಹಾನಿ ಮಾಡಿದ್ದಾನೆ. ಬಳಿಕ ಆಕೆಗೆ ಲೈಂಗಿಕ ಕಿರುಕುಳ ನೀಡಿ ಎಳೆದಾಡಿದ್ದಾನೆ. ಇದಾದ ಬಳಿಕ ಬೈಕ್‌ನಲ್ಲಿ ಬಂದ ಯುವಕನನ್ನು ದೂಡಿ, ಹಲ್ಲೆಗೈದಿದ್ದಾನೆ ಎಂದು ಆರೋಪಿಸಲಾಗಿತ್ತು.

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಜಯ್ ದೇವರಾಜ್ ಅವರು ತೀರ್ಪು ನೀಡಿದ್ದಾರೆ.

ವಿದ್ಯಾರ್ಥಿನಿಗೆ ಪರಿಹಾರ:

ದಂಡದ 20ಸಾವಿರ ರೂ. ಮೊತ್ತದಲ್ಲಿ 10ಸಾವಿರ ರೂ. ವಿದ್ಯಾರ್ಥಿನಿಗೆ ಪರಿಹಾರ ನೀಡಬೇಕು ಮತ್ತು ಅಪ್ರಾಪ್ತ ವಿದ್ಯಾರ್ಥಿನಿಗೆ ಕಾನೂನು ಸೇವಾ ಪ್ರಾಧಿಕಾರ 1ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಮೂಡುಬಿದಿರೆ ಈ ಹಿಂದಿನ ಇನ್‌ಸ್ಪೆಕ್ಟರ್ ದೇಜಪ್ಪ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಸರಕಾರದ ಪರವಾಗಿ ವಾದಿಸಿದ್ದರು.

ಆರೋಪಿಯ ಕ್ರಿಮಿನಲ್ ಹಿನ್ನಲೆ:

ಆರೋಪಿ ವಿರುದ್ಧ ಮಂಗಳೂರು ಮಹಿಳಾ ಠಾಣೆಯಲ್ಲಿ 2 ಪ್ರಕರಣ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಉರ್ವ ಪೊಲೀಸ್ ಠಾಣೆಯಲ್ಲಿ 1ಪ್ರಕರಣ, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ 1ಪ್ರಕರಣ ದಾಖಲಾಗಿದೆ. ಅತ್ಯಾಚಾರ, ಮಾದಕ ಸೇವನೆ ಮತ್ತು ಮಾರಾಟ ಪ್ರಕರಣದಲ್ಲೂ ಈತ ಭಾಗಿಯಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.ಆರೋಪಿ ನಾನಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

.