ಮಂಗಳೂರು: ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನದ ಆಶ್ರಯದಲ್ಲಿ ‘ಸ್ತ್ರೀ ಶಕ್ತಿ’ ಎಂಬ ಪರಿಕಲ್ಪನೆಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಮಾರ್ಚ್ 24 ರಂದು ಭಾನುವಾರ ಸಂಜೆ 5.30ಕ್ಕೆ ನಗರದ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ನಡೆಯಲಿದೆ.
ಉತ್ಕೃಷ್ಟ ಮಟ್ಟದ ಶಾಸ್ತ್ರೀಯ ಗಾಯನ ಮತ್ತು ‘ಸಿತಾರ್- ಸಂತೂರ್’ ಜುಗಲ್ಬಂಧಿ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಸಂಗೀತಪ್ರಿಯರಿಗೆ ಇದೊಂದು ಸಂಗೀತದ ರಸದೌತಣವಾಗಲಿದೆ. ಪೂರ್ವಾರ್ಧದಲ್ಲಿ ಬೆಂಗಳೂರಿನ ಶ್ರೀಲಕ್ಷ್ಮಿ ಬೆಳ್ಮಣ್ಣು ಇವರು
‘ಶಾಸ್ತ್ರೀಯ ಗಾಯನ’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ಇದಕ್ಕೆ ಹಾರ್ಮೋನಿಯಂನಲ್ಲಿ ಬೆಂಗಳೂರಿನ ನೀತಾ ಬೆಳಿಯೂರ್ ಮತ್ತು ಕುಂದಾಪುರದ ವಿಘ್ನೇಶ್ ಕಾಮತ್ ಅವರು ತಬ್ಲಾದಲ್ಲಿ ಸಾಥ್ ನೀಡಲಿದ್ದಾರೆ.
ಉತ್ತಾರಾರ್ಧದಲ್ಲಿ ಉಜ್ಜಯನಿಯ ಸಹೋದರಿಯರಾದ ಸಂಸ್ಕೃತಿ ವಹಾನೆ ಮತ್ತು ಪ್ರಕೃತಿ ವಾಹನೆ ಅವರಿಂದ ‘ಸಿತಾರ್ – ಸಂತೂರ್’ ಜುಗಲ್ ಬಂಧಿ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬ್ಲಾದಲ್ಲಿ ಹುಬ್ಬಳ್ಳೀಯ ಹೇಮಂತ್ ಜೋಶಿ ಅವರು ಸಾಥ್ ನೀಡಲಿದ್ದಾರೆ. ಈ ‘ಸ್ತ್ರೀ ಶಕ್ತಿ’ ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ಸಿಸಿಬಿ ವಿಭಾಗದ ಎಸಿಪಿ ಗೀತಾ ಡಿ ಕುಲಕರ್ಣಿ ಇವರು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ನರೇಂದ್ರ ಎಲ್. ನಾಯಕ್ ರವರು ಕೋರಿದ್ದಾರೆ.