ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಉರ್ಲಾಂಡಿಯಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಡಿ. 22 ರಂದು ಬೆಳಗ್ಗೆ ಸಂಭವಿಸಿದೆ.
ಕಬಕ ಗ್ರಾಮದ ನೆಹರೂನಗರ ಕುಡ್ವಸ್ ಕಂಪೌಂಡ್ ನಿವಾಸಿ, ರಿಕ್ಷಾ ಚಾಲಕ ಸೂರ್ಯಕುಮಾರ್ (64) ಮೃತರು. ಸೂರ್ಯಕುಮಾರ್ ಅವರು ಬೆಳಗ್ಗೆ 6.30 ಹೊತ್ತಿಗೆ ತನ್ನ ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ನೆಹರೂನಗರ ಕಡೆಯಿಂದ ಪುತ್ತೂರು ಮಹಾಮಾಯ್ಮಿ ಟೆಂಪಲ್ ರಸ್ತೆ ಕಡೆಗೆ ತೆರಳುತ್ತಿದ್ದ ವೇಳೆ ಉರ್ಲಾಂಡಿ ಬಳಿ ರಿಕ್ಷಾಕ್ಕೆ ಶ್ವಾನವೊಂದು ಅಡ್ಡ ಬಂದಿದ್ದು ಇದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿದೆ.
ಗಂಭೀರ ಗಾಯಗೊಂಡ ಚಾಲಕ ಸೂರ್ಯಕುಮಾರ್ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಸಹ ಪ್ರಯಾಣಿಕರಾದ ಕೇದರ್ ಕುಡ್ವ ಮತ್ತು ಕಾರ್ತಿಕ್ ಪೈ ಅವರಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.