ಮಂಗಳೂರು: ‘ಇಲ್ಲಿಯ ಪದವು ಶಕ್ತಿನಗರದ ಶ್ರೀಕೃಷ್ಣ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಸಮಾರಂಭದ ವೇಳೆ ಶಾಸಕ ವೇದವ್ಯಾಸ್ ಕಾಮತ್ ಅವರು ನಿಂದಿಸಿದ್ದನ್ನು ಆಕ್ಷೇಪಿಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಶಾಸಕ ವೇದವ್ಯಾಸ್ ಕಾಮತ್ ಕುಮ್ಮಕ್ಕು ನೀಡಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಸದಸ್ಯ ಯಶವಂತ ಪ್ರಭು ದೂರು ನೀಡಿದ್ದಾರೆ. ಶಾಸಕ ಕಾಮತ್ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಯಶವಂತ ಪ್ರಭು ಇತರರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಮಣಿ ಎಂಬುವರು ದೂರು ನೀಡಿದ್ದು, ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರತಿ ದೂರು ದಾಖಲಾಗಿದೆ. ಯಶವಂತ ಪ್ರಭು ಹಾಗೂ ಮಣಿ ಇಬ್ಬರೂ ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಪದವು ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಾನುವಾರ ರಾತ್ರಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಾನು ಸ್ವಯಂ ಸೇವಕ ಜವಾಬ್ದಾರಿ ಹೊಂದಿದ್ದೆ. ವೇದಿಕೆ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರನ್ನು ಬರಮಾಡಿಕೊಳ್ಳಲು ಆಶಾಲತಾ, ದಯಾನಂದ ನಾಯ್ಕ್ ಜೊತೆ ನಿಂತಿದ್ದೆ. ಈ ಕಾರ್ಯಕ್ರಮಕ್ಕೆ ಶಾಸಕ ವೇದವ್ಯಾಸ್ ಕಾಮತ್ ಸಹ ಅತಿಥಿಯಾಗಿದ್ದರು. ಅಲ್ಲಿಗೆ ಬಂದ ಕಾಮತ್, ನಮ್ಮನ್ನುದ್ದೇಶಿಸಿ ’ದೇವಸ್ಥಾನಕ್ಕೆ ಕಲ್ಲು ಹೊಡೆಯುವ ನಿಮಗೆ ಇಲ್ಲೇನು ಕೆಲಸ’ ಎಂದು ರಾಜಕೀಯ ಪ್ರೇರಿತವಾಗಿ ಮಾತನಾಡಿದರು’ ಎಂದಿದ್ದಾರೆ.
‘ಶಾಸಕ ಕಾಮತ್ ಸಮಾರಂಭದಿಂದ ತೆರಳುವ ವೇಳೆ ನೀವು ಹೀಗೇಕೆ ಹೇಳಿದ್ದೀರಿ ಎಂದು ನಾವು ಪ್ರಶಿಸಿದೆವು. ಬಿಜೆಪಿ ಕಾರ್ಯಕರ್ತರಾದ ಅಶ್ವಿತ್ ಕೊಟ್ಟಾರಿ, ಮಣಿ, ಜಯ ಪ್ರಕಾಶ್ ಹಾಗೂ ಇತರೆ ಎಳೆಂಟು ಜನರು ನನ್ನ ಮೇಲೆ ಹಲ್ಲೆ ನಡೆಸಿ ಕಾಲಿನಿಂದ ತುಳಿದು ಅಂಗಿ ಹರಿದರು. ಜಯಪ್ರಕಾಶ್ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದು, ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶಾಸಕ ವೇದವ್ಯಾಸ್ ಕಾಮತ್ ಅವರು ಆತನ ಕೈಕಾಲು ಮುರಿಯಿರಿ ಎಂದು ಆರೋಪಿಗಳಿಗೆ ಕುಮ್ಮಕ್ಕು ನೀಡಿದರು‘ ಎಂದು ಯಶವಂತ ಪ್ರಭು ದೂರಿನಲ್ಲಿ ತಿಳಿಸಿದ್ದಾರೆ.
ಕಂಕಣಾಡಿ ಪೊಲೀಸರು ಅಶ್ವಿತ್ ಕೊಟ್ಟಾರಿ, ಮಣಿ, ಜಯಪ್ರಕಾಸ್, ಶಾಸಕ ಡಿ.ವೇದವ್ಯಾಸ್ ಕಾಮತ್ ಮತ್ತು ಇತರ ಏಳೆಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.












