ಮಂಗಳೂರು: ಬೆಳ್ತಂಗಡಿ ಕಡಿರುದ್ಯಾವರ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿ ಸುಧೀರ್(27)ನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿವರ:
ಬಾಲಕಿಯು(13) ಬೆಳ್ತಂಗಡಿ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ಮನೆಯ ಆರೋಪಿ ಸುಧೀರ್‌ನ ಮನೆಗೆ ರಜಾ ದಿನಗಳಲ್ಲಿ ಹಾಗೆಯೇ ಇತರ ದಿನಗಳಲ್ಲಿ ಟಿ.ವಿ. ನೋಡಲು ಹೋಗುತ್ತಿದ್ದಳು. ಕೆಲವೊಂದು ಬಾರಿ ಸುಧೀರ್ ಮಾತ್ರ ಮನೆಯಲ್ಲಿರುತ್ತಿದ್ದು, 2021ನೇ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಬಾಲಕಿ ಆತನ ಮನೆಗೆ ಟಿ.ವಿ. ನೋಡಲು ಹೋಗಿದ್ದಾಗ ಅಂಗಡಿಗೆ ಹೋಗಿ ಬರೋಣ ಎಂದು ತಿಳಿಸಿ, ಅಂಗಡಿಗೆ ಕರೆದುಕೊಂಡು ಹೋಗದೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸುಧೀರ್‌ನ ಅಜ್ಜಿಯ ಯಾರೂ ವಾಸವಿಲ್ಲದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಈ ವಿಚಾರವನ್ನು ತಾಯಿಗೆ ಹೇಳುತ್ತೇನೆ ಎಂದು ಬಾಲಕಿ ಹೇಳಿದಾಗ ತಾಯಿಗೆ ಹೇಳಿದರೆ ನೀನೆ ನನ್ನ ಬಳಿ ಬಂದದ್ದು ಎಂದು ಹೇಳಿ ಪೊಲೀಸ್ ಕಂಪ್ಲೇಟ್ ಕೊಡುತ್ತೇನೆ ಎಂದು ಹೇಳಿ ಹೆದರಿಸಿದ್ದ. ಅನಂತರದ ದಿನಗಳಲ್ಲೂ ಬಾಲಕಿ ಆತನ ಮನೆಗೆ ರಜಾ ದಿನಗಳಲ್ಲಿ ಟಿ.ವಿ. ನೋಡಲು ಹೋದಾಗ ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ಅತ್ಯಾಚಾರ ನಡೆಸಿದ್ದ. ಜತಗೆ ಆತನ ಅಜ್ಜಿ ಮನೆಯಲ್ಲಿಯೂ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ. ಬಾಲಕಿ 2022 ಆಗಸ್ಟ್ ತಿಂಗಳ ಅನಂತರ ಗರ್ಭಿಣಿಯಾಗಿದ್ದಳು.
ಆರೋಪಿ ಮತ್ತು ಇತರರು ಸೇರಿ ಚಿಕ್ಕಮಗಳೂರು ಕಡೆ ಎಲ್ಲಿಯಾದರೂ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸುವ ಎಂದು ಯೋಜನೆ ರೂಪಿಸಿದ್ದರು. ಮದುವೆ ಆಗಿದ್ದು ಗಂಡ-ಹೆಂಡತಿ ಎಂದು ಆಸ್ಪತ್ರೆಯವರಿಗೆ ನಂಬಿಸಲು ಆಕೆಗೆ ಕಾಲುಂಗುರ, ಬೆಳ್ಳಿಯ ಕರಿಮಣಿ ಸರ ಹಾಕಿಸಿ ಮದುಮಗಳಂತೆ ಅಲಂಕಾರ ಮಾಡಿಸಿ ಆತನನೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಾಲಕಿಯ ಮನೆಗೆ ತೆರಳಿ ಆಕೆಯ ತಾಯಿಗೆ ಮದುವೆ ಮತ್ತು ಬರ್ತ್‌ಡೇಗೆ ಹೋಗಲು ಇದೆ ಎಂದು ಹೇಳಿ ನೊಂದ ಬಾಲಕಿಯನ್ನು ಕರೆದುಕೊಂಡು ಸುಧೀರ್ ಮತ್ತು ಇತರರು 2022ರ ಡಿ. 17ರಂದು ಚಿಕ್ಕಮಗಳೂರಿನ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ಆಕೆ ತನ್ನ ಹೆಂಡತಿ ಎಂದು ವೈದ್ಯರಿಗೆ ತಿಳಿಸಿ ಗರ್ಭಪಾತ ಮಾಡಿಸಿದ್ದರು.












