ಮಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಗೆ 10 ವರ್ಷ ಕಾರಗೃಹ ಶಿಕ್ಷೆ; ಆರೋಪಿಯ ತಂದೆ, ಬಾವನಿಗೂ ಜೈಲು ಶಿಕ್ಷೆ..!

ಮಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿಯ ಇಚ್ಚೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಅಪರಾಧಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಯುವತಿಗೆ ಇನ್ನಿಬ್ಬರು ಕೊಲೆ ಬೆದರಿಕೆ ಹಾಕಿದ್ದ ಆರೋಪವು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅವರಿಗೂ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಶಿಕ್ಷೆಗೊಳಗಾದ ಆರೋಪಿ ಪುತ್ತೂರು ಕಬಕದ ನಿವಾಸಿ ನಿತೇಶ್ (40). ಈತನ ತಂದೆ ರಾಮಣ್ಣ ಪೂಜಾರಿ (63), ಭಾವ ನಿಖಿತಾಶ್ ಸುವರ್ಣ (40) ಕೊಲೆ ಬೆದರಿಕೆ ಹಾಕಿದ ಆರೋಪಿಗಳು. ಇವರಿಬ್ಬರಿಗೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹5,000 ದಂಡ ವಿಧಿಸಲಾಗಿದೆ. ನಿತೇಶ್ ಗೆ ಜೈಲು ಶಿಕ್ಷೆಯ ಜತೆಗೆ ರೂ 10 ಸಾವಿರ ದಂಡ ವಿಧಿಸಲಾಗಿದೆ.

ಏನೀದು ಘಟನೆ:
ನಿತೇಶ್ ಸಂತ್ರಸ್ತ ಯುವತಿಯನ್ನು ಪರಿಚಯಿಸಿಕೊಂಡು ಆತ್ಮೀಯತೆ ಬೆಳೆಸಿಕೊಂಡಿದ್ದ. ಬಳಿಕ ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದ. ಆಕೆಯ ಮನೆಗೂ ಹೋಗಿ ಬಲವಂತದಿಂದ ದೈಹಿಕ ಸಂಪರ್ಕ ನಡೆಸಿದ್ದ. ಯುವತಿ ಮದುವೆಯಾಗುವಂತೆ ಕೋರಿದಾಗ ಉಲ್ಟಾ ಹೊಡೆದು ಅದನ್ನು ನಿರಾಕರಿಸಿದ್ದ, ಪರಸ್ಪರ ಜಾತಿ ಬೇರೆಯಾಗಿರುವುದರಿಂದ ತಂದೆ ಮತ್ತು ಬಾವ ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿದ್ದನು. ಈ ಹಿನ್ನಲೆಯಲ್ಲಿ ಆ ಯುವತಿ ನಿತೇಶ್ ತಂದೆ ಮತ್ತು ಭಾವನ ಭೇಟಿ ಮಾಡಿ ವಿವಾಹ ಮಾಡಿ ಕೊಡುವಂತೆ ವಿನಂತಿಸಿಕೊಂಡಿದ್ದರು. ಆ ವೇಳೆ ಅವರು ಅವಾಚ್ಯ ಪದಗಳಲ್ಲಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು. ಈ ಸಂಬಂಧ ಯುವತಿ 2019ರಲ್ಲಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯಕ್ ತನಿಖೆ ನಡೆಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಾಂತರಾಜು ಎಸ್.ವಿ, ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ನೊಂದ ಯುವತಿಗೆ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ. ಶೇಖರ ಶೆಟ್ಟಿ, ಚೌಧರಿ ಮೋತಿಲಾಲ್ ವಾದ ಮಂಡಿಸಿದ್ದರು. ಒಟ್ಟು 16 ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಲಾಗಿತ್ತು.