ಮಂಗಳೂರು:ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕುರಿತು ಆಸಕ್ತಿ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯು ಫೆಬ್ರವರಿ 8 ಮತ್ತು 9ರಂದು ಯುವ ಮಹೋತ್ಸವ 2025 ಎಂಬ ಸಂಗೀತ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಆಯೋಜಿಸಿದೆ.
ಇದೊಂದು ರಾಷ್ಟ್ರಮಟ್ಟದ ಸ್ಪರ್ಧೆಯಾಗಿದ್ದು, 18 ರಿಂದ 30 ವರ್ಷದೊಳಗಿನ ಯುವ ಸಂಗೀತಗಾರರು ಭಾಗವಹಿಸಬಹುದು. ಭಾಗವಹಿಸುವ ಸ್ಪರ್ಧಿಗಳಿಗೆ ಆನ್ಲೈನ್ನಲ್ಲಿ ಆಯ್ಕೆ ನಡೆಯಲಿದೆ. ಅನ್ಲೈನ್ನ ಆಯ್ಕೆಗೆ ಜ.10 ಕೊನೆಯ ದಿನವಾಗಿದೆ.
ಆಸಕ್ತರು yuva2025.sangeetbharati.org ನಲ್ಲಿ ಹೆಸರು ನೋಂದಾಯಿಸಿ ಭಾಗವಹಿಸಬಹುದಾಗಿದೆ.ವಾದ್ಯ (ತಬಲ ಮತ್ತು ಪಕವಾಜ್ ಹೊರತುಪಡಿಸಿ) ಹಾಗೂ ಹಾಡುಗಾರಿಕೆ ವಿಭಾಗದಲ್ಲಿ ಸ್ಪರ್ಧೆ ಇದ್ದು, ವಿಜೇತರಿಗೆ ಸ್ವರ ಭಾರತೀ ಬಿರುದು ಸೇರಿದಂತೆ ಪ್ರಥಮ ಸ್ಥಾನಿಗೆ 6೦ ಸಾವಿರ, ದ್ವಿತೀಯ ಸ್ಥಾನಿಗೆ 4೦ ಸಾವಿರ ಹಾಗೂ ತೃತೀಯ ಸ್ಥಾನಿಗೆ 2೦ ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಸಂಗೀತ ಭಾರತಿ ಫೌಂಡೇಶನ್ನ ಪ್ರಕಟಣೆ ತಿಳಿಸಿದೆ.
ಪಂ. ರೋನು ಮುಜುಂದಾರ್, ಉಸ್ತಾದ್ ರಫೀಕ್ ಖಾನ್, ಪಂ. ಜಯತೀರ್ಥ ಮೇವುಂಡಿ, ಪಂ. ಯಶವಂತ್ ವೈಷ್ಣವ್, ವಿದೂಷಿ ಪೂರ್ಣಿಮಾ ಭಟ್ ಕುಲಕರ್ಣಿ ಹಾಗೂ ಡಾ. ಶಶಾಂಕ್ ಅವರ ತಂಡವು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಲಿದ್ದಾರೆ.
ಅಂತಿಮ ಸುತ್ತು ಫೆ. 8 ಮತ್ತು 9 ರಂದು ಮಂಗಳೂರಿನಲ್ಲಿ ನಡೆಯಲಿದೆ. ರಾಷ್ಟ್ರೀಯ ವೇದಿಕೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಸುವರ್ಣ ಅವಕಾಶವಾಗಿದೆ.