ಮಂಗಳೂರು:ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದ ಅಂಕುಶ್ ಎನ್. ನಾಯಕ್

ಮಂಗಳೂರು:ದೇಶದ ಹೆಮ್ಮೆಯ ಯುವ ಸಿತಾರ್ ವಾದಕ ಮಂಗಳೂರಿನ ಅಂಕುಶ್ ಎನ್. ನಾಯಕ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯ ವಿಭಾಗದಲ್ಲಿ ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ
ಪಡೆದಿದ್ದಾರೆ.

ದೂರದರ್ಶನ ಹಾಗೂ ಆಕಾಶವಾಣಿಯಿಂದ ಎ-ಗ್ರೇಡ್
ಪಡೆಯುವುದು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ
ಅತ್ಯುನ್ನತ ಮಟ್ಟದ ಕಲಾ ಶ್ರೇಷ್ಠತೆ ಹಾಗೂ
ಮಾನ್ಯತೆಯಾಗಿದೆ. ಈ ಮೂಲಕ ಪ್ರಸಾರ ಭಾರತಿಯ
ಸಹಯೋಗದೊಂದಿಗೆ ನಡೆಯುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗೀತ ವೇದಿಕೆಗಳಿಗೆ ನುಡಿಸುವ
ಅರ್ಹತೆಯನ್ನು ಅಂಕುಶ್ ಎನ್. ನಾಯಕ್ ಪಡೆದಿದ್ದಾರೆ.

ಈ ಪ್ರಮಾಣೀಕರಣವನ್ನು ಶೇ. 10 ಕ್ಕಿಂತ ಕಡಿಮೆ ಪ್ರದರ್ಶನ ಕಲಾವಿದರಿಗೆ ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಬ್ಬರ ಸಂಗೀತ ವೃತ್ತಿ ಜೀವನದಲ್ಲಿ ಮಹತ್ವದ ಮೈಲುಗಲ್ಲು ಆಗಿದೆ.

ಸಂಗೀತದ ಪ್ರಕಾರದಲ್ಲಿ ಸಾರ್ವಕಾಲಿಕ ಶ್ರೇಷ್ಠತೆಗಾಗಿ
ನಿರಂತರವಾಗಿ ಅಧ್ಯಯನ ನಡೆಸಿ, ಆ ಮೂಲಕ ಸಂಗೀತಕ್ಕಾಗಿ ಜೀವನ ಸಮರ್ಪಣೆ ಮಾಡಿ, ಸಂಗೀತದ ಪಾಂಡಿತ್ಯ ಸಾಧನೆಗೆ ಈ ಗ್ರೇಡ್ ಸಾಕ್ಷಿಯಾಗಿರುತ್ತದೆ.

ಪ್ರಸ್ತುತ ಅಂಕುಶ್ ಎನ್. ನಾಯಕ್ ಅವರು ಮಂಗಳೂರಿನ ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾಗಿದ್ದಾರೆ. ಧಾರವಾಡ ಘರಾನಾದ ಆರನೇ ತಲೆಮಾರಿನ ಖಾಂದಾನಿ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಅವರ ಶಿಷ್ಯರಾಗಿರುವ ಅಂಕುಶ್ ಎನ್.ನಾಯಕ್ ಅವರು, ಗುರುವಿನ ಮಾರ್ಗದರ್ಶನದಂತೆ ಗುರಿಯನ್ನು ಮುಂದಿಟ್ಟುಕೊಂಡು ಬಾಲ್ಯದಿಂದಲೇ ಸಿತಾರ್‌ನ ತಂತಿಗಳನ್ನು ಬೆರಳಿನ ತುದಿಗಳಲ್ಲಿ ಮೀಟಿಸಿದ ಕಲಾವಿದ. 9ನೇ ವಯಸ್ಸಿನಲ್ಲಿ ಸಿತಾರ್ ಕಲಿಯಲು
ಆರಂಭಿಸಿದರು. ಸಾಂಪ್ರದಾಯಿಕ ಉತ್ತರಾಧಿ ಸಂಗೀತ
ಕಚೇರಿಯೊಂದಿಗೆ ಫ್ಯೂಷನ್ ತಂಡವನ್ನು ಕಟ್ಟಿಕೊಂಡು,
ದೇಶ ವಿದೇಶದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ಅಂಕುಶ್ ಅವರು ಘಟಂ ಮಾಂತ್ರಿಕ ವಿದ್ವಾನ್ ತಿರುಚ್ಚಿ ಕೆ. ಆರ್. ಕುಮಾರ್ ಅವರಿಂದ ಕರ್ನಾಟಕ ಸಂಗೀತ ತಾಳ ಪದ್ಧತಿಯ ಪಾಠವನ್ನೂ ಕಲಿತಿದ್ದಾರೆ. ಅವರು ಸರೋದ್ ಕಲಾವಿದ ಪಂ. ಬುದ್ಧದೇವ್ ದಾಸ್
ಗುಪ್ತಾ ಅವರಿಂದ ತರಬೇತಿ ಪಡೆದಿದ್ದಾರೆ.

ಇಂಟರ್ ನ್ಯಾಷನಲ್ ಫೌಂಡೇಶನ್ ಫಾರ್ ಫೈನ್ ಆರ್ಟ್ಸ್ ನೀಡುವ ಪ್ರತಿಷ್ಠಿತ ರವಿ ಕೊಪ್ಪಿಕರ್ ಪ್ರಶಸ್ತಿ ಮತ್ತು ಅವಿನಾಶ್ ಹೆಬ್ಬಾರ್ ಸ್ಮಾರಕ ಯುವ ಪುರಸ್ಕಾರ, ದಕ್ಷಿಣ ಕನ್ನಡ ರಾಜ್ಯೋತ್ಸವ
ಪ್ರಶಸ್ತಿ, ಕಲಾ ಅಪರಂಜಿ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದಿಂದ ಮೆಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಎಂ.ಎಸ್. ಪದವಿ ಮತ್ತು ಸುರತ್ಕಲ್‌ನ ಎನ್‌ಐಟಿಕೆಯಿಂದ ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ಸ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ವರ್ಜೀನಿಯಾ
ವಿಶ್ವವಿದ್ಯಾಲಯದ ಡಾರ್ಡನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಡಿಜಿಟಲ್
ಟ್ರಾನ್ಸ್ಫಾರ್ಮೇಷನ್‌ನಲ್ಲಿ ಪ್ರಮಾಣಪತ್ರವನ್ನು ಪಡೆದಿದ್ದಾರೆ.