ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಇದರಿಂದ ನದಿ, ಹೊಳೆ, ತೊರೆ ಉಕ್ಕಿಹರಿಯುತ್ತಿದೆ.ಕಾಪು ತಾಲೂಕಿನ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುರ್ಕಾಲು ಪರಿಸರದಲ್ಲಿ ಹಾದುಹೋಗುವ ಪಾಪನಾಶಿನಿ ನದಿ ತುಂಬಿ ಹರಿಯುತ್ತಿದೆ. ಕುರ್ಕಾಲು ಕಿಂಡಿ ಅಣೆಕಟ್ಟು ಬಳಿ ನದಿ ರಭಸದಿಂದ ಹರಿಯುತ್ತಿದ್ದು, ಅಣೆಕಟ್ಟಿಗೆ ಮರಳುಗಾರಿಕೆಗೆ ಬಳಕೆಯಾಗುತ್ತಿದ್ದ ದೋಣಿಯೊಂದು ಸಿಲುಕಿಕೊಂಡಿದೆ. ಇದರಿಂದ ನೀರಿನ ಹರಿವಿಗೆ ತಡೆಯಾಗಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಆತಂಕ ಶುರುವಾಗಿದೆ. ಮಳೆ ಮುಂದುವರಿದರೆ ಪಾಪನಾಶಿನಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಬರುವ ಸಾಧ್ಯತೆ ಇದೆ. ಫಲವತ್ತಾದ ಕೃಷಿ ಭೂಮಿ ಕೂಡ ಮುಳುಗಡೆ ಯಾಗುವ ಭೀತಿ ಉಂಟಾಗಿದೆ.















