ಉಡುಪಿ: ಭಾರೀ ಗಾಳಿ-ಮಳೆಯಿಂದಾಗಿ ಮನೆಯೊಂದರ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ನಡೆದಿದೆ.
ಬುಧವಾರ ರಾತ್ರಿ ಭಾರೀ ಗಾಳಿ-ಮಳೆ ಬಂದ ಪರಿಣಾಮ ಹೆಮ್ಮಾಡಿ ಗ್ರಾ.ಪಂ ವ್ಯಾಪ್ತಿಯ ಗುಂಡಿಕೊಡ್ಲು ಸೀತಾ ದೇವಾಡಿಗ ಅವರ ಮನೆಯ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ.
ಮರ ಬಿದ್ದ ರಭಸಕ್ಕೆ ಮನೆಯ ಮಹಡಿ ಸಂಪೂರ್ಣ ಕುಸಿದ ಪರಿಣಾಮ ಮನೆಯೊಳಗೆ ಮಲಗಿದ್ದ ಸೀತಾ ದೇವಾಡಿಗ ಅವರ ಪತಿ ಶಂಕರ ದೇವಾಡಿಗ ಅವರ ತಲೆ ಹಾಗೂ ಮೈಮೇಲೆ ಹೆಂಚು ಬಿದ್ದು ಗಾಯ ಗೊಂಡಿದ್ದಾರೆ. ಗಾಯಾಳು ಶಂಕರ ದೇವಾಡಿಗ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಉಳಿದಂತೆ ಮನೆಯ ಟಿವಿ ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳು ಮಳೆ ನೀರಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಗುರುವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮಕರಣಿಕ ಅನಿಲ್ ಮೇತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.