ಭಾರತದಲ್ಲಿ ಮೊದಲ ‘ಮಂಕಿಪಾಕ್ಸ್’ ಪ್ರಕರಣ ಪತ್ತೆ: ಭಯ ಪಡುವ ಅಗತ್ಯವಿಲ್ಲ; ಕೇಂದ್ರ ಆರೋಗ್ಯ ಸಚಿವಾಲಯ.

ನವದೆಹಲಿ: ಇತ್ತೀಚಿಗೆ ಹೊರ ದೇಶದಿಂದ ಭಾರತಕ್ಕೆ ಬಂದ ವ್ಯಕ್ತಿಯೋರ್ವನಿಗೆ ‘ಮಂಕಿಪಾಕ್ಸ್ ‘ ತಗುಲಿರುವುದಾಗಿ ಶಂಕಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ರೋಗಿಯನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಆತನ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.

ಮಂಕಿಪಾಕ್ಸ್ ಇದೆಯೇ ಎಂಬುದನ್ನು ತಿಳಿಯಲು ರೋಗಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಶಿಷ್ಟಾಚಾರದ ಪ್ರಕಾರ ಪ್ರಕರಣವನ್ನು ನಿರ್ವಹಿಸಲಾಗುತ್ತಿದೆ ಮತ್ತು ಮಂಕಿಪಾಕ್ಸ್ ಮೂಲ ತಿಳಿಯಲು ಹಾಗೂ ದೇಶದೊಳಗೆ ಅದರ ಪರಿಣಾಮವನ್ನು ನಿರ್ಣಯಿಸಲು ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಯಾಣ-ಸಂಬಂಧಿತ ಪ್ರಕರಣಗಳನ್ನು ಎದುರಿಸಲು ದೇಶವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಯಾವುದೇ ಸಂಭಾವ್ಯ ಅಪಾಯವನ್ನು ನಿರ್ವಹಿಸಲು ಮತ್ತು ತಗ್ಗಿಸಲು ದೃಢವಾದ ಕ್ರಮಗಳನ್ನು ಹೊಂದಿದೆ ಎಂದು ಸಚಿವಾಲಯ ತಿಳಿಸಿದೆ.

ಆಫ್ರಿಕಾದ ಕಾಂಗೋ ಸೇರಿದಂತೆ 13 ದೇಶಗಳಲ್ಲಿ ಮಂಕಿಪಾಕ್ಸ್ ಕಾಯಿಲೆ ವೇಗವಾಗಿ ಹರಡುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.