ಉಡುಪಿ: ಉಡುಪಿಯ ಬ್ರಹ್ಮಾವರ ಸಮೀಪದ ಚೇರ್ಕಾಡಿಯಲ್ಲಿ ಅಪರೂಪದ ವಿದ್ಯಮಾನ ಸಂಭವಿಸಿದೆ. ಚೇರ್ಕಾಡಿಯಲ್ಲಿ ಕಳೆದ ಎರಡು ದಿನಗಳ ಕಾಲ ಸಾಂಪ್ರದಾಯಿಕ ಕಂಬಳ ವರ್ಷಂಪ್ರತಿಯಂತೆ ನಡೆಯಿತು.
ಕಂಬಳ ನಡೆಯುವಾಗ ಗುತ್ತಿನ ಮನೆತನದ ಹಿರಿಯರು ಮುಖ್ಯಸ್ಥರಾಗಿ ಎಲ್ಲವನ್ನು ನಿರ್ವಹಿಸುವ ಪರಿಪಾಠ ಇದೆ . ತಮ್ಮ ಅತ್ಯಂತ ಇಳಿ ವಯಸ್ಸಿನಲ್ಲಿ ಗುತ್ತಿನ ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ ಚೇರ್ಕಾಡಿ ಜಯರಾಮ ಹೆಗ್ಡೆ ಎನ್ನುವವರು ಕೊನೆಯುಸಿರೆಳೆದಿದ್ದಾರೆ.
ಕಂಬಳ ಮುಗಿಯುವವರೆಗಿನ ಎಲ್ಲಾ ವಿಧಿ ವಿಧಾನಗಳಲ್ಲಿ ಅವರು ಭಾಗವಹಿಸಿದ್ದರು. ಕೊನೆಯದಾಗಿ ತೆಂಗಿನಕಾಯಿಯನ್ನು ಒಡೆದು ಮನೆ ಸೇರಿದ್ದರು. ಮನೆಗೆ ಹೋದ ನಂತರ ಕೊನೆಯುಸಿರೆಳೆದಿರುವುದು, ಸಂಪ್ರದಾಯದ ಕುರಿತಾದ ಅವರ ಶ್ರದ್ಧೆಗೆ ಸಾಕ್ಷಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
90 ವಯಸ್ಸು ಮೀರಿದ ಇವರು, ತಮ್ಮ ಅನಾರೋಗ್ಯಗಳನ್ನು ಲೆಕ್ಕಿಸದೆ ಕಂಬಳ ನಡೆಸಿಕೊಟ್ಟಿದ್ದಾರೆ. ಒಂದು ವೇಳೆ ಕಂಬಳ ನಡೆಯುವಾಗ ಅಥವಾ ಅದಕ್ಕಿಂತ ಮುಂಚೆ ಸಾವು ಸಂಭವಿಸಿದ್ದರೆ ಈ ಕಂಬಳ ರದ್ದಾಗ ಬೇಕಿತ್ತು.