ಉಡುಪಿ: ಬ್ರಹ್ಮಾವರದಲ್ಲಿ ಪ್ಲೈಓವರ್ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಸಾರ್ವಜನಿಕರು ಬುಧವಾರ ಬೃಹತ್ ಧರಣಿ ನಡೆಸಿದರು.
ಧರಣಿಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ಜನರು ಸಿಟಿ ಸೆಂಟರ್‌ನಿಂದ ಎಸ್.ಎಂ.ಎಸ್. ಮೂಲಕ ದೂಪದಕಟ್ಟೆಯವರೆಗೆ ತುರ್ತು ಸರ್ವಿಸ್ ರಸ್ತೆ ನಿರ್ಮಿಸಬೇಕು. ಹಾಗೆಯೇ ಶಾಶ್ವತ ಪರಿಹಾರವಾಗಿ ಪ್ಲೈ ಓವರ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು. ಸದ್ಯ ಇರುವ ಹೆದ್ದಾರಿ ರಸ್ತೆ ಅವೈಜ್ಞಾನಿಕವಾಗಿದ್ದು, ಪ್ರತಿದಿನ ಸಾವುನೋವು ಸಂಭವಿಸುತ್ತಿವೆ. ಈಗಾಗಲೇ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವಾರದೊಳಗೆ ಸರ್ವಿಸ್ ರಸ್ತೆಯ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಬ್ರಹ್ಮಾವರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಬ್ರಹ್ಮಾವರದ 30ಕ್ಕೂ ಅಧಿಕ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಧರಣಿಗೆ ಕೈ ಜೋಡಿಸಿದ್ದವು.
ಬಹಳ ಅಪಾಯಕಾರಿ ಸ್ಥಳಗಳಾಗಿರುವ ಬ್ರಹ್ಮಾವರ ಬಸ್‌ಸ್ಟ್ಯಾಂಡ್ ವಠಾರ, ಮಹೇಶ್ ಆಸ್ಪತ್ರೆ ಎದುರಿನ ಡಿವೈಡರ್, ಆಕಾಶವಾಣಿ ಜಂಕ್ಷನ್‌ನಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎ.1ರಂದು ಮಹೇಶ್ ಆಸ್ಪತ್ರೆ ಎದುರಿನ ಡಿವೈಡರ್ ಬಳಿ ಸಂಭವಿಸಿದ ಅಪಘಾತದಲ್ಲಿ ಶಾಲಾ ವಿದ್ಯಾರ್ಥಿ ಓರ್ವ ಬಲಿಯಾಗಿದ್ದಾನೆ.













