ಉಡುಪಿ: ಜಿಲ್ಲಾ ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ರವರ ಜಯಂತಿ ಆಗಸ್ಟ್ 20 ರಂದು ಹಾಗೂ ಶ್ರೀ ಕೃಷ್ಣ ಜಯಂತಿಯನ್ನು ಆಗಸ್ಟ್ 26 ರಂದು ಸಂಭ್ರಮ ಹಾಗೂ ವಿಜೃಂಭಣೆಯಿಂದ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶ್ರೀಕೃಷ್ಣ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ರವರ ಜಯಂತಿ ಕಾರ್ಯಕ್ರಮವನ್ನು ಆಗಸ್ಟ್ 20 ರಂದು ಮಲ್ಪೆಯ ನಾರಾಯಣ ಗುರು ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಆಯೋಜಿಸಬೇಕು. ಖ್ಯಾತ ಉಪನ್ಯಾಸಕರನ್ನು ಕರೆಸಿ, ನಾರಾಯಣ ಗುರು ಅವರ ಬಗ್ಗೆ ಉತ್ತಮ ಉಪನ್ಯಾಸ ಏರ್ಪಡಿಸಬೇಕು ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಅವರ ತತ್ವ ಹಾಗೂ ಆದರ್ಶಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದ ಅವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು. ಆಗಸ್ಟ್ 26 ರಂದು ಶ್ರೀಕೃಷ್ಣ ಜಯಂತಿಯನ್ನು ಬೆಳಗ್ಗೆ 10 ಗಂಟೆಗೆ ಉಡುಪಿಯ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಆಯೋಜಿಸುವಂತೆ ತಿಳಿಸಿದ ಅವರು, ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ಶ್ರೀಕೃಷ್ಣನ ಕುರಿತು ಉಪನ್ಯಾಸ ಏರ್ಪಡಿಸುವುದರೊಂದಿಗೆ ಚಿಕ್ಕ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಿ, ಉತ್ತಮ ಪ್ರದರ್ಶನ ನೀಡುವ ಮಕ್ಕಳಿಗೆ ಬಹುಮಾನ ವಿತರಿಸಬೇಕು ಎಂದರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಹ ಆಗಸ್ಟ್ 20 ರಂದು ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಆಗಸ್ಟ್ 26 ರಂದು ಶ್ರೀ ಕೃಷ್ಣ ಜಯಂತಿಯನ್ನು ತಹಶೀಲ್ದಾರ ಗಳ ಉಸ್ತುವಾರಿಯಲ್ಲಿ ನಡೆಸಬೇಕು ಎಂದರು.
ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶ್ರೀಕೃಷ್ಣನ ಕುರಿತು ಅವರ ತತ್ವ ಆದರ್ಶಗಳನ್ನು ತಿಳಿಸುವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ, ಜನಪ್ರತಿನಿಧಿಗಳಿಗೆ, ಗಣ್ಯರಿಗೆ, ವಿವಿಧ ಸಂಘಟನೆಗಳ ಮುಖಂಡರುಗಳಿಗೆ ನೀಡಿ ಆಹ್ವಾನಿಸಬೇಕು ಎಂದರು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರ ಆದರ್ಶಗಳು ಜನಸಾಮಾನ್ಯರಿಗೆ ಮನಮುಟ್ಟುವಂತೆ ತಿಳಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಡಿ.ಡಿ.ಪಿ.ಯು ಮಾರುತಿ, ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಶ್ರೀ ಕೃಷ್ಣ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮತ್ತಿತರರು
ಉಪಸ್ಥಿತರಿದ್ದರು.