ಬೈಂದೂರು: ಶಾಸಕ ಗಂಟಿಹೊಳೆಯಿಂದ ತಾಲೂಕು ಕಚೇರಿ ಎದುರು ದಿಢೀರ್ ಅಹೋರಾತ್ರಿ ಧರಣಿ

ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಶಾಸಕರ ಜನತಾ ಕಾರ್ಯಾಲಯಗಳಲ್ಲಿ ಅಧಿಕಾರಿಗಳ ಸಭೆ ಕರೆದರೆ ಅಧಿಕಾರಿಗಳು ಭಾಗವಹಿಸಬಾರದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ.

ಅಧಿಕಾರಿಗಳ ಅಸಹಕಾರದಿಂದ ಬೇಸತ್ತ ಶಾಸಕ ಗುರುರಾಜ್ ಗಂಟಿಹೊಳೆ ಅವರು ಬೈಂದೂರು ತಾಲೂಕು ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಪ್ಪುಂದದ ಕಾರ್ಯಕರ್ತ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗಧಿಯಾಗಿತ್ತು. ಈ ಸಭೆಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾರದೆ ಇರುವುದನ್ನು ಖಂಡನೀಯ. ಜಿಲ್ಲಾಧಿಕಾರಿಗಳು ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಯ ಹಕ್ಕನ್ನು ಜಿಲ್ಲಾಧಿಕಾರಿಗಳು ಕಸಿದುಕೊಂಡಿದ್ದಾರೆ ಎಂದು ದೂರಿದರು. ಶಾಸಕರ ಬೆಂಬಲಕ್ಕೆ ನೂರಾರು ಕಾರ್ಯಕರ್ತರು ಬೈಂದೂರಿನಲ್ಲಿ ಜಮಾಯಿಸಿದ್ದಾರೆ.