ಬೈಂದೂರು, ಜೂ.11: ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಬೈಂದೂರು ಯೋಜನಾ ನಗರದಲ್ಲಿ ನಡೆದಿದೆ.
ಮೃತರನ್ನು ಬ್ರಹ್ಮಾವರ ಮಟಪಾಡಿಯ ನಾಗರತ್ನ(42) ಎಂದು ಗುರುತಿಸಲಾಗಿದೆ. ಇವರು ತನ್ನ ಮಕ್ಕಳು ಹಾಗೂ ನವೀನ್ ಎಂಬವರೊಂದಿಗೆ ವಾಸ ಮಾಡಿಕೊಂಡಿದ್ದು, ಜೂ.10ರಂದು ಮನೆಯಲ್ಲಿ ಕುಸಿದು ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥ ಗೊಂಡ ಇವರು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗ ಮೃತಪಟ್ಟರೆಂದು ತಿಳಿದುಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು ಇವರ ಮರಣದಲ್ಲಿ ಅನುಮಾನ ಇರುವುದಾಗಿ ಮೃತರ ಸಹೋದರ ಕೃಷ್ಣ ದೂರಿನಲ್ಲಿ ತಿಳಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.