ಉಡುಪಿ: ಬೈಂದೂರು ತಾಲೂಕಿನ ನಾಗೂರಿನಲ್ಲಿ ಬಾವಿಯೊಂದರಲ್ಲಿ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿದ್ದ ಬೃಹತ್ ಗಾತ್ರದ ಮೊಸಳೆ ಕೊನೆಗೂ ಸೆರೆ ಸಿಕ್ಕಿದೆ.
ತೋಟದ ಬಾವಿಯಲ್ಲಿದ್ದ ಮೊಸಳೆ ಸೆರೆಗೆ ನಿನ್ನೆಯಿಂದ ಅರಣ್ಯ ಇಲಾಖೆ ಹರಸಾಹಸ ಪಟ್ಟಿತ್ತು. ನಿನ್ನೆ ಇಡೀ ದಿನ ಮೊಸಳೆ ಹಿಡಿಯಲು ನಾನಾ ತಂತ್ರ ಉಪಯೋಗಿಸಿ ವಿಫಲಗೊಂಡಿದ್ದ ಇಲಾಖೆಗೆ ಇಂದು ಸ್ಥಳೀಯ ಮೀನುಗಾರರು ಸಾಥ್ ನೀಡಿದರು. ಇವತ್ತು ಇಲ್ಲಿನ ಮೀನುಗಾರ ಮಂಜು ಖಾರ್ವಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೊಸಳೆಯನ್ನು ಬಲೆಗೆ ಕೆಡವಲಾಯಿತು.
ಬಲೆ ಇನ್ನಿತರ ಪರಿಕರ ಬಳಸಿ ಮೀನುಗಾರರು ಮೊಸಳೆಯನ್ನು ಸೆರೆ ಹಿಡಿದ ಬಳಿಕ ಅದರ ಆರೋಗ್ಯ ತಪಾಸಣೆ ನಡೆಸಿ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಯಿತು.
ಕೆಲವು ದಿನಗಳ ಹಿಂದೆ ಈ ಪರಿಸರದಲ್ಲಿ ಭಾರೀ ನೆರೆ ಕಾಣಿಸಿಕೊಂಡಿದ್ದು, ಮೊಸಳೆ ನದಿ ಅಥವಾ ಸಮುದ್ರದ ನೀರಿನೊಂದಿಗೆ ಕೊಚ್ಚಿಕೊಂಡು ಬಂದು ತೋಟದ ಬಾವಿ ಸೇರಿಕೊಂಡಿತ್ತು. ಮೊಸಳೆ ನೋಡಲು ಗ್ರಾಮದ ನೂರಾರು ಮಂದಿ ಆಗಮಿಸಿದ್ದು, ಅದನ್ನು ಸೆರೆಹಿಡಿಯುವುದರೊಂದಿಗೆ ಅವರೆಲ್ಲ ನಿಟ್ಟುಸಿರುಬಿಟ್ಟರು.