ಬೈಂದೂರು ತಾಲೂಕಿನ ಕೆಡಿಪಿ ಸಭೆಯಲ್ಲಿ ಭಾರೀ ಕೋಲಾಹಲ

ಉಡುಪಿ: ಶಾಸಕರು ತಮ್ಮ ಪಕ್ಷದ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿರುವುದು ಸಮಂಜಸವಲ್ಲ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರು ಪ್ರಸ್ತಾಪಿಸಿದ ವಿಷಯ ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೆ.ಡಿ.ಪಿ ಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ರಣರಂಗಕ್ಕೆ ವೇದಿಕೆಯಾಯಿತು. ನೂತನ ನಾಮನಿರ್ದೇಶಿತ ಕೆ.ಡಿ.ಪಿ ಸದಸ್ಯರಾದ ಜಗದೀಶ ದೇವಾಡಿಗ, ಶೇಖರ ಪೂಜಾರಿ ಉಪ್ಪುಂದ ಹಾಗೂ ನರಸಿಂಹ ಹಳಗೇರಿ ಅವರು ಮಾತನಾಡಿ, ಬೈಂದೂರು ಶಾಸಕರು ತಮ್ಮ ಖಾಸಗಿ ಕಚೇರಿಯಲ್ಲಿ ಅಧಿಕಾರಿಗಳ ಅಧಿಕೃತ ಸಭೆ ಕರೆಯುವುದು ಸರಿಯಲ್ಲ. ಈ ಸಭೆಯಿಂದ ಜನಸಾಮಾನ್ಯರಿಗೆ ಯಾವುದೇ ನ್ಯಾಯ ದೊರಕುವುದಿಲ್ಲ ಎಂದು ಟೀಕಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಗಂಟಿಹೊಳೆ ಅವರು, ಕೆಡಿಪಿ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತ ಚರ್ಚೆ ಮಾಡಬೇಕು. ರಾಜಕೀಯ ಉದ್ದೇಶದಿಂದ ಅನಗತ್ಯ ಚರ್ಚೆ ಮಾಡುವುದು ಸರಿಯಲ್ಲ. ಇದರಿಂದ ಶಾಸಕರ ಹಕ್ಕುಚ್ಯುತಿಯಾದಂತೆ ಆಗುತ್ತದೆ. ಹೀಗಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಅನುಮತಿ ಮೂಲಕ ಚರ್ಚೆ ನಡೆಯಬೇಕು ಎಂದರು.

ಈ ವೇಳೆ ಶಾಸಕರು ಹಾಗೂ ಕೆಡಿಪಿ ನಾಮನಿರ್ದೇಶಿತ ಸದಸ್ಯರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ತೀವ್ರ ಸಿಟ್ಟಿಗೆದ್ದ ಶಾಸಕರು, ಕೆಡಿಪಿ ಸಭೆಯಲ್ಲಿ ರಾಜಕೀಯ ದುರುದ್ದೇಶದಿಂದ ಚರ್ಚೆಗೆ ಎಳೆಯಲಾಗುತ್ತಿದೆ ಎಂದು ಹಕ್ಕುಚ್ಯುತಿ ಮಂಡಿಸಿ ಸಭೆಯಿಂದ ಹೊರನಡೆದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಗಂಟಿಹೊಳೆ ಅವರು, ಕಾಂಗ್ರೆಸ್‌ ಪಕ್ಷ ಹಠಕ್ಕೆ ಬಿದ್ದಿದೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ‌ ಆಗಬಾರದು. ಯಾವುದೇ ಕಾರಣಕ್ಕೂ ಶಾಸಕರಿಗೆ ಸಭೆ ನಡೆಸಲು ಬಿಡಬಾರದೆಂದು ತೀರ್ಮಾನಿಸಿದೆ.

ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ಮಾಡಬಾರದು ಎಂದು ಎಲ್ಲೂ ಹೇಳಿಲ್ಲ. ಒಂದೊಮ್ಮೆ ನನ್ನಿಂದ ತಪ್ಪಾದರೆ ಅದಕ್ಕೆ ಹಿಂಬರಹ ನೀಡಬೇಕೆಂದು ಕೇಳಿದ್ದೇನೆ. ಆದರೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ವರದಿ ಪಡೆಯಬೇಕಾಗಿರುವುದು ನಿಯಮ. ಆದರೆ ಕಾಂಗ್ರೆಸ್ ಪಕ್ಷದ ಕೆಡಿಪಿ ಸದಸ್ಯರ ಇಂತಹ ವರ್ತನೆ ಬೈಂದೂರಿನ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಕೆ.ಡಿ.ಪಿ ಸದಸ್ಯ ಶೇಖರ ಪೂಜಾರಿ ಮಾತನಾಡಿ, ನಾವು ಸಭೆಯಲ್ಲಿ ಶಾಸಕರೊಂದಿಗೆ ಗೌರವದಿಂದಲೇ ವರ್ತಿಸಿದ್ದೇವೆ. ಜಿಲ್ಲಾಧಿಕಾರಿಗಳು ಸ್ಪಷ್ಟವಾಗಿ ಹೇಳಿದ ಬಳಿಕವೂ ಶಾಸಕರು ಪ್ರಭಾವ ಬಳಸಿ ಅಧಿಕಾರಿಗಳನ್ನು ಪಕ್ಷದ ಕಚೇರಿಯಲ್ಲಿ ಕರೆದು ಸಭೆ ನಡೆಸಿರುವ ಬಗ್ಗೆ ಪ್ರಶ್ನಿಸಿದ್ದೇವೆ. ನಾವು ಕೂಡ ಸರಕಾರದಿಂದ ನಿಯುಕ್ತಿಗೊಂಡ ನಾಮನಿರ್ದೇಶಿತ ಸದಸ್ಯರಾಗಿದ್ದೇವೆ. ಶಾಸಕರು ಏಕಾಏಕಿ ಹಾರಟ ನಡೆಸಿರುವುದು ನಮ್ಮ ಅಧಿಕಾರದ ಹಕ್ಕು ಚ್ಯುತಿಯಾದಂತೆ. ಹೀಗಾಗಿ ಶಾಸಕರು ಗೌರವ ಮತ್ತು ತಾಳ್ಮೆಯಿಂದ ವರ್ತಿಸಬೇಕು ಎಂದು ಹೇಳಿದರು.