ಬೈಂದೂರು: ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಉಡುಪಿ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬೈಂದೂರು ತಾಲೂಕಿ ಯಡ್ತರೆಯ ಸೇನೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಮೃತ ವಿದ್ಯಾರ್ಥಿಗಳನ್ನು ಬೈಂದೂರು ಯೋಜನಾ ನಗರದ ನಿವಾಸಿ‌ ಕೃಷ್ಣ ಅವರ ಪುತ್ರ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಶಾನು ಶಾಲಿಯಾನ್ ಅವರ ಪುತ್ರ ಮೊಹಮದ್ ಶಫಾನ್ (13) ಎಂದು ಗುರುತಿಸಲಾಗಿದೆ.

ಬೈಂದೂರು ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ನಾಗೇಂದ್ರ ಹಾಗೂ ಶಫಾನ್ ಮಧ್ಯಾಹ್ನ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದರು. ಬಳಿಕ ಊಟ ಮಾಡಿ ಬೈಂದೂರು ನಗರ ಸಮೀಪದ ಕೆರೆಕಟ್ಟೆ ಕೆರೆಯಲ್ಲಿ ಈಜಲು ತೆರಳಿದ್ದರು. ಇಬ್ಬರಿಗೂ ಸರಿಯಾಗಿ ಈಜು ಬಾರದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಿದ ಬಳಿಕ ಕೆರೆ ಸಮೀಪ ಸೈಕಲ್ ಹಾಗೂ ಚಪ್ಪಲಿ ಇದ್ದುದರಿಂದ ಕೆರೆಯಲ್ಲಿ ಹುಡುಕಾಟ‌ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.