ಉಡುಪಿ: ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಬೃಹತ್ ಹೆಬ್ಬಾವು ಕಂಡು ಕಾರು ಮಾಲೀಕ ಬೆಚ್ಚಿಬಿದ್ದಿದ್ದಾರೆ.
ಬಡಕೆರೆ ಜೋಯಿಸರಬೆಟ್ಟು ನಿವಾಸಿ ಚಂದ್ರಪ್ರಕಾಶ್ ಶೆಟ್ಟಿ ಎಂಬವರ ಕಾರಿನ ಬಾನೆಟ್ ನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಅವರು ಕಾರು ಚಲಾಯಿಸಿಕೊಂಡು ಬರುವಾಗ ಕಾರಿನಲ್ಲಿ ವಿಪರೀತ ಸದ್ದು ಕೇಳಿಸಿದೆ. ಕಾರು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 12ಅಡಿ ಉದ್ದದ ಹೆಬ್ಬಾವೊಂದು ಬಾನೆಟ್ ಒಳಗೆ ತಣ್ಣಗೆ ಮಲಗಿತ್ತು. ಕಾರು ಚಲಾಯಿಸಿಕೊಂಡು ಹೋದಾಗ ಬಿಸಿಯ ಹಿನ್ನೆಲೆಯಲ್ಲಿ ಹೆಬ್ಬಾವು ಹೊರಗೆ ಬರಲು ಒದ್ದಾಡಿತ್ತು. ಕಾರಿನ ಮಾಲೀಕ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಸುರಕ್ಷಿತವಾಗಿ ಹೆಬ್ಬಾವನ್ನು ಅಭಯಾರಣ್ಯಕ್ಕೆ ಬಿಡಲಾಯಿತು.