ಬೆಂಗಳೂರು: ಹುರಿದ ಹಸಿರು ಬಟಾಣಿ ಕಾಳಿನ ಮಾದರಿಗಳು ಅಸುರಕ್ಷಿತ: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆ ವರದಿ

ಬೆಂಗಳೂರು: ಹುರಿದ ಹಸಿರು ಬಟಾಣಿ ಕಾಳಿನ 31 ಮಾದರಿಗಳನ್ನು ಕೃತಕ ಬಣ್ಣಗಳ ಪರೀಕ್ಷೆಗೊಳಪಡಿಸಿರುವ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆ, ಈ ಪೈಕಿ 26 ಮಾದರಿಗಳು ಅಸುರಕ್ಷಿತ ಎಂದು ಘೋಷಿಸಿದೆ. ಒಟ್ಟು 106 ಹುರಿದ ಹಸಿರು ಬಟಾಣಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇನ್ನುಳಿದ ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಹೊರಡಿಸಿದ ಪ್ರಕಟನೆಯನ್ವಯ ಇಡೀ ರಾಜ್ಯಾದ್ಯಂತ ನಡೆಯುತ್ತಿರುವ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪರೀಕ್ಷೆ ಅಭಿಯಾನದ ಭಾಗವಾಗಿ ಈ ಪರೀಕ್ಷೆಯನ್ನು ನಡೆಸಲಾಗಿದೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸನ್ಸೆಟ್ ಯೆಲ್ಲೊ, ಟೆಟ್ರಾಝೈನ್ ನಂತಹ ನಿಷೇಧಿತ ಬಣ್ಣಗಳು ಅವುಗಳಲ್ಲಿ ಕಂಡು ಬಂದಿವೆ. ಇವನ್ನು ನಿಷೇಧಿಸಲಾಗಿದ್ದು, ಅವು ಕ್ಯಾನ್ಸರ್ ಕಾರಕವಾಗುವ ಸಾಧ್ಯತೆ ಇದೆ. ಹೀಗಾಗಿ ಅವನ್ನು ಎಲ್ಲಿಯೂ ಬಳಸಬಾರದು. ಈ ಪ್ರವೃತ್ತಿ ನಮ್ಮ ಕಳವಳಕ್ಕೆ ಕಾರಣವಾಗಿದೆ” ಎಂದು ಹೇಳಿದರು.

ಗುರುವಾರ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹಾಳೆ ಬಳಕೆಯ ನಿಷೇಧವನ್ನು ಪ್ರಕಟಿಸಿದ ಬೆನ್ನಿಗೇ, ರಾಜ್ಯಾದ್ಯಂತ ಇರುವ 681 ಆಹಾರ ಮಳಿಗೆಗಳನ್ನು ತಪಾಸಣೆಗೊಳಪಡಿಸಿದ ನಂತರ, ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿರುವ ರಾಜ್ಯಾದ್ಯಂತ ಇರುವ 52 ಉಪಾಹಾರ ಗೃಹಗಳಿಗೆ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಈ ಪೈಕಿ 12 ಉಪಾಹಾರ ಗೃಹಗಳು ಬೆಂಗಳೂರು ನಗರ ಜಿಲ್ಲೆಯಲ್ಲಿದ್ದರೆ, ಎಂಟು ಉಪಾಹಾರ ಗೃಹಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ.ಇದರೊಂದಿಗೆ ಕೇಕ್ ಗಳಲ್ಲಿನ ಕೃತಕ ಬಣ್ಣಗಳ ಬಳಕೆ ಪ್ರಮಾಣ ಇಳಿಕೆಯಾಗಿರುವುದನ್ನೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆ ಪತ್ತೆ ಹಚ್ಚಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ 295 ಕೇಕ್ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಲಾಗಿತ್ತು. ಈ ಪೈಕಿ 12 ಮಾದರಿಗಳು (ಶೇ. 4.06) ಅಸುರಕ್ಷಿತ ಎಂಬ ಫಲಿತಾಂಶ ಬಂದಿತ್ತು. ಜನವರಿ ತಿಂಗಳಲ್ಲಿ ಕೃತಕ ಹಾಗೂ ಅಸುರಕ್ಷಿತ ಬಣ್ಣಗಳ ಬಳಕೆಯ ಕುರಿತು ವಿಶೇಷ ಮರು ಅಭಿಯಾನ ನಡೆಸಿದ್ದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆ, ರಾಜ್ಯಾದ್ಯಂತ ಸಂಗ್ರಹಿಸಲಾಗಿದ್ದ 603 ಕೇಕ್ ಮಾದರಿಗಳ ಪೈಕಿ ಕೇವಲ 7 ಮಾದರಿಗಳು ಅಸುರಕ್ಷಿತವಾಗಿರುವುದನ್ನು ಪತ್ತೆ ಹಚ್ಚಿತ್ತು ಎಂದು ಅವರು ತಿಳಿಸಿದರು.

ನೀರಿನ ಮಾದರಿಯ ಪರೀಕ್ಷೆ

ಫೆಬ್ರವರಿ ತಿಂಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿಶೇಷ ಅಭಿಯಾನದ ಭಾಗವಾಗಿ ರಾಜ್ಯ ಆರೋಗ್ಯ ಇಲಾಖೆಯು 288 ಬಾಟಲಿಗಳಲ್ಲಿನ ಕುಡಿಯುವ ನೀರನ್ನೂ ಪರೀಕ್ಷೆಗೊಳಪಡಿಸಿದೆ.

ತಮ್ಮ ದೈನಂದಿನ ತಪಾಸಣೆಯ ಭಾಗವಾಗಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆಯು ಜನವರಿಯಲ್ಲಿ 3,608 ಹಾಗೂ ಫೆಬ್ರವರಿಯಲ್ಲಿ 2,543 ಆಹಾರ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗೊಳಪಡಿಸಿದೆ. ಈ ಪೈಕಿ 34 ಮಾದರಿಗಳು ಅಸುರಕ್ಷಿತ ಹಾಗೂ 33 ಮಾದರಿಗಳು ಕಳಪೆ ಗುಣಮಟ್ಟ ಹೊಂದಿವೆ ಎಂದು ಅದು ಘೋಷಿಸಿದೆ.