ಬೆಂಗಳೂರು:ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ

ಬೆಂಗಳೂರು: ಮುಂದಿನ ವಾರ ಪೂರ್ವೋತ್ತರ ಮಾರುತಗಳ ಹಿನ್ನೆಲೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಕಡೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಗುರುವಾರ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮೈಸೂರು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ. ಒಳನಾಡಿನ ಒಂದೆರಡು ಕಡೆ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ. ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಾ.12 ರಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆಯಾಗಿದೆ. ಉಳಿದೆಡೆ ಒಣಹವೆ ಇತ್ತು. ಪ್ರಮುಖವಾಗಿ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39.1 ಡಿ.ಸೆ., ವಿಜಯಪುರದಲ್ಲಿ 37.4 ಡಿ.ಸೆ., ಗದಗದಲ್ಲಿ 37 ಡಿ.ಸೆ., ಬಾಗಲಕೋಟೆಯಲ್ಲಿ 37.2 ಡಿ.ಸೆ. ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ37 ಡಿ.ಸೆ. ತಾಪಮಾನ ದಾಖಲಾಗಿದೆ.

ಮಲ್ನಾಡಿಗೆ ಮೊದಲ ಮಳೆ:
ಕಳಸ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಭಾಗಗಳಲ್ಲಿ ಬುಧವಾರ ಗಾಳಿ ಸಹಿತ ಗುಡುಗಿನೊಂದಿಗೆ ವರ್ಷದ ಮೊದಲ ಮಳೆ ಸುರಿದಿದೆ. ಬೆಳಗ್ಗೆಯಿಂದಲೇ ಬಿಸಿಲಿನಿನ ತಾಪ ಜನರನ್ನು ಕಂಗೆಡಿಸಿತ್ತು. ಮಧ್ಯಾಹ್ನದ ಹೊತ್ತಿಗೆ ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಸಂಜೆಯಾಗುತ್ತಿದ್ದಂತೆ ಗುಡುಗು ಸಹಿತ ಜೋರು ಮಳೆಯಾಗಿದೆ.

ಕಳಸ ಪಟ್ಟಣ ಸೇರಿದಂತೆ ಬಾಳೆಹೊಳೆ, ಹಳುವಳ್ಳಿ, ಮುನ್ನೂರ್‌ ಪಾಲ್‌, ಮರಸಣಿಗೆ, ಹಿರೇಬೈಲ್‌, ಸಂಸೆ, ಹೊರನಾಡು ಹಾಗೂ ಮೂಡಿಗೆರೆ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ. ಬಿರು ಬಿಸಿಲಿನಿಂದ ಕಂಗೆಟ್ಟಿದ ಜನತೆಗೆ ಮಳೆ ತಂಪೆರೆದರೆ, ಕಾಫಿ, ಅಡಕೆ, ಮೆಣಸು ಬೆಳೆಗೆ ಅನುಕೂಲವಾಯಿತು.

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ ಮೂರೂವರೆ ಹೊತ್ತಿಗೆ ಸುಳ್ಯ ಮತ್ತು ಕಡಬ ತಾಲೂಕಿನ ನಾನಾ ಕಡೆ ಅಬ್ಬರದ ಮಳೆಯಾಗಿದ್ದರೆ, ಸಂಜೆಯ ವೇಳೆಗೆ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುರತ್ಕಲ್‌, ಕಿನ್ನಿಗೋಳಿ, ಮೂಡುಬಿದಿರೆ ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಕಾರ್ಕಳದಲ್ಲಿ ಭಾರೀ ಗಾಳಿ ಹಾಗೂ ಮಳೆಯಾಗಿದೆ. ಬಂಡೀಮಠ ಬಳಿಯ ನಿವಾಸಿ ಆನಂದ ಎಂಬವರ ಮನೆಗೆ ತೆಂಗಿನ ಮರ ಬಿದ್ದು 30 ಸಾವಿರ ರೂ. ನಷ್ಟ ಸಂಭವಿಸಿದೆ. ದಾನ ಶಾಲಾ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಪರ್ಕಳ ಕೊಡಂಗೆಯ ಶ್ರೀ ರಾಮ ಭಜನಾ ಮಂದಿರದ ಬಳಿ ಬುಧವಾರ ಗಾಳಿಗೆ ಮರವೊಂದು ಉರುಳಿ ವಿದ್ಯುತ್‌ ಕಂಬದ ಮೇಲೆ ಬಿದ್ದು, ರಸ್ತೆಯ ಮಧ್ಯಭಾಗಕ್ಕೆ ಎರಡು ವಿದ್ಯುತ್‌ ಕಂಬಗಳ ಸಹಿತ ಧರೆಗೆ ಉರುಳಿದೆ. ಮಣಿಪಾಲ ಮೆಸ್ಕಾಂ ಸಿಬ್ಬಂದಿ ತಕ್ಷಣ ತೆರವು ಕಾರ್ಯ ನಡೆಸಿ ವಿದ್ಯುತ್‌ ಕಂಬ ಅಳವಡಿಸಿದ್ದಾರೆ.