ಬೀಜಿಂಗ್‌: ಕೊರೋನ ವೈರಸ್ ಬಳಿಕ ಚೀನಾದಲ್ಲಿ ಮತ್ತೊಂದು ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ

ಬೀಜಿಂಗ್‌: 2020ರಲ್ಲಿ ವಿಶ್ವವನ್ನು ಕಾಡಿದ್ದ ಕೋವಿಡ್‌-19 ಸಾಂಕ್ರಾಮಿಕದ ಕರಿನೆರಳಿನಿಂದ ಹೊರಬಂದು, ದೇಶಗಳು ಸಹಜ ಸ್ಥಿತಿಯತ್ತ ಮರಳುತ್ತಿರುವಂತೆಯೇ ಚೀನದಲ್ಲಿ ಮತ್ತೊಂದು ಸಾಂಕ್ರಾಮಿಕ ಹರಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿವೆ.

ಹೌದು, ಇದಕ್ಕೆ ಪುಷ್ಟಿ ನೀಡುವಂತೆ ಚೀನದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬು ತುಳುಕುತ್ತಿರುವ ವೀಡಿಯೋಗಳೂ ವೈರಲ್‌ ಆಗಿದೆ. ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಈ ವೀಡಿಯೋ ಪೋಸ್ಟ್‌ ಮಾಡಿ, “ಚೀನದಲ್ಲಿ ಹೊಸ ಸಾಂಕ್ರಾಮಿಕದಿಂದ ಆಸ್ಪತ್ರೆಗಳು, ಶವಾಗಾರಗಳು ತುಂಬಿ ತುಳುಕುತ್ತಿದ್ದು, ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ವಿಷಮ ಶೀತ, ಜ್ವರ, ಕೋವಿಡ್‌ ಸೇರಿ ಹಲವು ವೈರಸ್‌ಗಳು ವೇಗವಾಗಿ ಹಬ್ಬುತ್ತಿವೆ’ ಎಂದು ಬರೆದಿದ್ದಾರೆ. ಆದರೆ, ಈ ಅಂಶಗಳಿಗೆ ಯಾವುದೇ ಆಧಾರ ಸಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯಾಗಲೀ, ಚೀನ ಆಡಳಿತವಾಗಲೀ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ಹೊರಡಿಸಿಲ್ಲ. ಇನ್ನೊಂದೆಡೆ, ಕೊರೊನಾ ವೈರಸ್‌ನ ಮೂಲದ ಬಗ್ಗೆ ಅಧ್ಯಯನ ನಡೆಸಲು ಕಳೆದ 5 ವರ್ಷಗಳ ದತ್ತಾಂಶ ನೀಡುವಂತೆ ಚೀನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೇಳಿದೆ.