ಬಂಟಕಲ್: ವಾದಿರಾಜ ಮಠದ ಶೈಕ್ಷಣಿಕ ಸಂಸ್ಥೆಗಳಿಗೆ ಮುಖ್ಯ ಆಡಳಿತಾಧಿಕಾರಿ ನೇಮಕ

ಬಂಟಕಲ್: ಸೋದೆ ಶ್ರೀ ವಾದಿರಾಜ ಮಠದಿಂದ ಪ್ರವರ್ತಿತವಾದ ಶಿಕ್ಷಣ ಸಂಸ್ಥೆಗಳು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದು ಎಲ್ಲಾ ವಿದ್ಯಾಸಂಸ್ಥೆಗಳು ಬೆಳವಣಿಗೆಯ ಉತ್ತುಂಗದಲ್ಲಿದೆ.

ಈ ವಿದ್ಯಾಸಂಸ್ಥೆಗಳು ಇನ್ನಷ್ಟು ಬೆಳವಣಿಗೆ ಹೊಂದಲು ದಕ್ಷ ಆಡಳಿತಾಧಿಕಾರಿಯ ಅಗತ್ಯತೆಯನ್ನು ಮನಗಂಡು ಶಿಕ್ಷಣ
ಕ್ಷೇತ್ರದಲ್ಲಿ ಸುಮಾರು 38 ವರ್ಷಗಳಿಗೂ ಮಿಕ್ಕಿ ಅಪಾರ ಅನುಭವ ಹೊಂದಿರುವ ಮಣಿಪಾಲದ ಅಂತರಾಷ್ಟ್ರೀಯ ಅನ್ವಯಿಕ ವಿಜ್ಞಾನ ಶಿಕ್ಷಣ ಕೇಂದ್ರದ ನಿರ್ದೇಶಕರಾಗಿದ್ದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರನ್ನು ಸೋದೆ ಮಠದ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ದಿನಾಂಕ 31 ಮಾರ್ಚ್ 2025 ರಂದು ಅಧಿಕಾರ ವಹಿಸಿಕೊಂಡ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರು ಈ ಮೊದಲು ಮೂರು ವರ್ಷಗಳ ಕಾಲ ಸೋದೆ ಮಠದ ಶ್ರೀ
ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯ ಇದರ ಪ್ರಾಂಶುಪಾಲರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.

ಈ ಸಂದರ್ಭದಲ್ಲಿ ಶ್ರೀ ಸೋದೆ ವಾದಿರಾಜ ಶಿಕ್ಷಣ ಪ್ರತಿಷ್ಠಾನದ
ಕಾರ್ಯದರ್ಶಿಗಳಾದ ಶ್ರಿ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹರೀಶ್ ಬೆಳ್ಮಣ್, ಸೋದೆ ವಾದಿರಾಜ ಮಠದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲರು, ಎಂಬಿಎ ವಿಭಾಗದ ನಿರ್ದೇಶಕರು, ಡೀನ್‌ಗಳು ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರೊ. ಡಾ. ರಾಧಾಕೃಷ್ಣ ಎಸ್ ಐತಾಳ್ ಇವರ ನಿರ್ದೇಶನದಲ್ಲಿ ಸೋದೆ ಮಠದ ಎಲ್ಲಾ ಶಿಕ್ಷಣ ಸಂಸ್ಥೆಗಳು ಮಾದರಿ ಸಂಸ್ಥೆಗಳಾಗಿ ರೂಪುಗೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿ ಎಂದು ಶ್ರೀ ಸೋದೆ ಮಠದ ಶ್ರೀಪಾದರು ಶುಭಾಶೀರ್ವಾದ ಮಾಡಿದ್ದಾರೆ.