ಬಂಟಕಲ್ ಕಾಲೇಜಿನಲ್ಲಿ “ಅಂತರರಾಷ್ಟ್ರೀಯ ಯೋಗ ದಿನದ” ಆಚರಣೆ

ಉಡುಪಿ: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‍ ಕ್ರಾಸ್ ಘಟಕ, ರೋಟರ್ಯಾಕ್ಟ್ ಘಟಕ ವತಿಯಿಂದ “ಸಮಾಜಕ್ಕಾಗಿ ಮತ್ತು ನಮಗಾಗಿ ಯೋಗ” ಎಂಬ ವಿಷಯದ ಕುರಿತು ಜೂನ್ 21 ರಂದು ಯೋಗದ ಬಗ್ಗೆ ಉಪನ್ಯಾಸವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶ್ರೀ ಕೆ ರಾಘವೇಂದ್ರ ಭಟ್, ಜಿಲ್ಲಾ ಪ್ರಭಾರಿ, ಭಾರತ್ ಸ್ವಾಭಿನಾನ್ ಟ್ರಸ್ಟ್, ಉಡುಪಿ ಮತ್ತು ಶ್ರೀ ಸದಾಶಿವ ರಾವ್, ನಿವೃತ್ತ ಪ್ರಾಧ್ಯಾಪಕರು, ಪೂರ್ಣ ಪ್ರಜ್ಞಾ ಕಾಲೇಜು, ಉಡುಪಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಶ್ರೀ ಸದಾಶಿವ ರಾವ್ ಮಾತನಾಡಿ ವಿದ್ಯಾರ್ಥಿಗಳು ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಹೊಂದಲು
ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಶ್ರೀ ಕೆ ರಾಘವೇಂದ್ರ ಭಟ್ ಮತ್ತು ಶ್ರೀ ಸದಾಶಿವ ರಾವ್ ಯೋಗ ಪ್ರಾರ್ಥನೆಯೊಂದಿಗೆ ಯೋಗ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು. ಇವರು ತಾಡಾಸನ, ವೃಕ್ಷಾಸನ, ತ್ರಿಕೋನಾಸನ, ಭದ್ರಾಸನ, ವಕ್ರಾಸನ, ಶಶಾಂಕಾಸನ, ಭುಜಂಗಾಸನ, ಶವಾಸನ, ಪ್ರಾಣಾಯಾಮ, ಧ್ಯಾನ ಮುಂತಾದ ಆಸನಗಳನ್ನು ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಪ್ರದರ್ಶಿಸಿ ಆ ಆಸನಗಳ ಮಹತ್ವವನ್ನು ವಿವರಿಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಯುವಕರು ಮತ್ತು ಮಕ್ಕಳು ತಮ್ಮ ಜೀವನದಲ್ಲಿ ಯೋಗದ ಮಹತ್ವವನ್ನು ತಿಳಿದುಕೊಳ್ಳಲು ಯೋಗ ದಿನಾಚರಣೆಯನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕೆಂದು ತಿಳಿಸಿದರು. ವಿದ್ಯಾರ್ಥಿನಿಯರಾದ ಹಿತಶ್ರೀ ಪ್ರಾರ್ಥಿಸಿದರು, ಅನನ್ಯ ಸ್ವಾಗತಿಸಿದರು, ಅದಿತಿ ವಂದಿಸಿದರು ಮತ್ತು ನಿಧಿಪಾಟ್ಕರ್ ಕಾರ್ಯ ಕ್ರಮಮವನ್ನು ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‍ ಕ್ರಾಸ್ ಘಟಕ, ರೋಟರ್ಯಾಕ್ಟ್ ಘಟಕದ ಸಂಯೋಜಕರಾದ ನಾಗರಾಜ್ ರಾವ್ ಕಾರ್ಯಕ್ರಮವನ್ನು ಸಂಯೋಜಿಸಿದರು.