ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಬಂಟಕಲ್‌: ಬಂಟಕಲ್ ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 15ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಶನಿವಾರ, 22 ಮಾರ್ಚ್ 2025 ರಂದು ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರಗಿತು.

ಸಮಾರಂಭದಲ್ಲಿ ಮೂಡಬಿದ್ರಿಯ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಶ್ರೀ ಸೋದೆ ಮಠದ ಜ್ಞಾನ ದಾಸೋಹದ ಕುರಿತು ಪ್ರಶಂಶಿಸಿದರು. ಪರಮಾತ್ಮನೇ ಪ್ರಪಂಚದ ಶ್ರೇಷ್ಠ ಇಂಜಿನಿಯರೆಂದು ಅಭಿಪ್ರಾಯ ಪಟ್ಟರು ಹಾಗು ಇಂಜಿನಿಯರಿಂಗ್ ರಂಗ
ಅನಾದಿಕಾಲದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು.

ಮೂಡಬಿದ್ರೆಯ ಜೈನಮಠದೊಂದಿಗೆ ಶ್ರೀ ಸೊದೆ ವಾದಿರಾಜ ಮಠದ ಒಡನಾಟವನ್ನು ಸ್ಮರಿಸಿದರು. ಮತ್ತು ವಿದ್ಯಾರ್ಥಿಗಳು ಆಧ್ಯಾತ್ಮವನ್ನು ಅರ್ಥ ಮಾಡಿಕೊಳ್ಳುವಂತೆ ತಿಳಿಸಿದರು.
ನೆಲ, ಜಲ, ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಬೇಕೆಂದರು.
ಉಡುಪಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಅವರು ತಮ್ಮ ಆಶೀರ್ವಚನದಲ್ಲಿ ನಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿಗಳನ್ನು ಅನುಕರಣೆ ಮಾಡುವ ಬದಲು ಅನುಸರನೆ ಮಾಡಬೇಕೆಂದು ತಿಳಿಸಿದರು.

ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿ ಡಾಟಾ ಪ್ಯಾಟರ್ನ್ಸ್ ಲಿಮಿಟೆಡ್ ಇದರ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಶ್ರೀ ಶ್ರೀನಿವಾಸ ಗೋಪಾಲನ್ ರಂಗರಾಜನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಐ ಐಟಿ ಮದರಸಿನಲ್ಲಿ ಕಳೆದ ತಮ್ಮ ಕಾಲೇಜು ದಿನಗಳನ್ನು ಮೆಲಕುಹಾಕಿದರು. ಮೌಲ್ಯಾಧಾರಿತ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯ ಆಶಯವನ್ನು ಪ್ರಶಂಶಿಸಿದರು. ಅಲ್ಲದೆ ತಮ್ಮ ಸಂಸ್ಥೆಯನ್ನು ಇಂದಿನ ಮಟ್ಟಕ್ಕೆ ಕೊಂಡೊಯ್ದ ದಾರಿಯನ್ನು ವಿವರಿಸಿದರು.

ಶ್ರೀಮತಿ ರೇಖಾಮೂರ್ತಿ ರಂಗರಾಜನ್ ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಡಾಟಾ ಪ್ಯಾಟರ್ನ್ಸ್ ಲಿಮಿಟೆಡ್‌ನ ನೇಮಕಾತಿ ಪ್ರಕ್ರಿಯೆಯ ಬಗ್ಗೆ ವಿವರಿಸಿದರು.ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಕಾರ್ಯದರ್ಶಿಗಳಾದ ರತ್ನಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್ 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಹಾಗೂ ಗೌತಮ ಫೌಂಡೇಶನ್‌ನಿಂದ ನೀಡಲ್ಪಟ್ಟ ವಿದ್ಯಾರ್ಥಿವೇತನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಅಂತಿಮ ವರ್ಷದ ಉತ್ತಮ ಸಾಧಕ ವಿದ್ಯಾರ್ಥಿಗಳಿಗೆ ಕೊಡುವ “ಶ್ರೀ ಮಧ್ವ ವಾದಿರಾಜ
ಪ್ರಶಸ್ತಿ”ಯನ್ನು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ಪ್ರಥಮ್ ಎಲ್ ಕಾಮತ್ ಮತ್ತು ಹಿತಾಶ್ರೀ ಇವರಿಗೆ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಹಯವದನ ಪ್ರಶಸ್ತಿಯನ್ನು ನೀಡಲಾಯಿತು. ಡಾಕ್ಟರೇಟ್ ಪದವಿ ಪಡೆದುಕೊಂಡ ಅಧ್ಯಾಪಕರನ್ನು ಗೌರವಿಸಲಾಯಿತು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀನಿವಾಸ ತಂತ್ರಿ, ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಆಡಳಿತ ಮಂಡಳಿ ಸದಸ್ಯರಾದ ಡಾ. ಎಸ್ ಜಿ ಗೋಪಾಲಕೃಷ್ಣ, ಹರೀಶ್ ಬೆಳ್ಮಣ್, ವಿದ್ಯಾರ್ಥಿ ಕೌನ್ಸಿಲ್‌ನ ಅಧ್ಯಕ್ಷ ಅನುರಾಗ್ ಆರ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಧ್ಯಾಪಕರಾದ ಡಾ. ಶಿಲ್ಪಾ ಕಾಮತ್, ಡಾ. ರಾಜಾ ಯತೀಶ್ ಯಾದವ್ ಮತ್ತು ರಾಘವೇಂದ್ರ ಜಿ ಎಸ್ ಅತಿಥಿಗಳನ್ನು ಪರಿಚಯಿಸಿದರು. ಡೀನ್ ಡಾ. ಸುದರ್ಶನ್ ರಾನ್
ಮತ್ತು ಡಾ. ರವಿಪ್ರಭಾ ವಿದ್ಯಾರ್ಥಿ ವೇತನವನ್ನು ಪಡೆದವರ ವಿವರವನ್ನು ನೀಡಿದರು.

ಚಿತ್ಕಲಾ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ
ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ ಶ್ರೀಮತಿ ಸೌಮ್ಯಾ ಭಟ್ ಮತ್ತು ಮಲ್ಯ ಅನಂತ್ ಮೋಹನ್ ನಿರೂಪಿಸಿದರು. ಪ್ರಾಧ್ಯಾಪಕರಾದ ಸಚಿನ್ ಪ್ರಭು ವಂದನಾರ್ಪಣೆ ಮಾಡಿದರು.