ಚೆನ್ನೈ: ಫೆಂಗಲ್ ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿ ಭಾರೀ ಅನಾಹುತಕ್ಕೆ ಕಾರಣವಾಗಿದ್ದು, ಭಾರೀ ಮಳೆ ಮತ್ತು ಪ್ರವಾಹವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿವಿಧ ಭಾಗಗಳ ಮೇಲೆ ದೊಡ್ಡ ಮಟ್ಟದಪರಿಣಾಮ ಬೀರಿದ್ದು, ವ್ಯಾಪಕ ಹಾನಿಯಲ್ಲಿ ಕನಿಷ್ಠ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದ್ದು, ಪ್ರವಾಹದ ನೀರಿನಿಂದ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.
ಕೃಷ್ಣಗಿರಿಯಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿದ್ದು ವಿಶೇಷವಾಗಿ ಉತ್ತಂಗಿರಿ ಬಸ್ ನಿಲ್ದಾಣದಲ್ಲಿ ಹಲವಾರು ವಾಹನಗಳು ಪ್ರವಾಹ ಮುಳುಗಿವೆ. ಬಲವಾದ ಪ್ರವಾಹದಿಂದ ಬಸ್ ಗಳು ಮತ್ತು ಕಾರುಗಳು ಕೊಚ್ಚಿ ಹೋಗಿರುವುದು ಪರಿಸ್ಥಿತಿಯ ತೀವ್ರತೆಯನ್ನು ಎತ್ತಿ ತೋರಿಸಿದೆ.ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲು ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ರಕ್ಷಣ ಕಾರ್ಯಾಚರಣೆಗಳು ಸಕ್ರಿಯವಾಗಿ ನಡೆಯುತ್ತಿವೆ. ಪುದುಚೇರಿಯಲ್ಲಿ ಪ್ರವಾಹದಲ್ಲಿ ಮುಳುಗಿದ್ದ ಮನೆಯೊಂದರಲ್ಲಿ ಸಿಲುಕಿದ್ದ ಶಿಶುವನ್ನು ರಕ್ಷಿಸುವಲ್ಲಿ ಭಾರತೀಯ ಸೇನೆ ನಿರ್ಣಾಯಕ ಪಾತ್ರ ವಹಿಸಿದೆ.
ಏತನ್ಮಧ್ಯೆ, ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಭೂಕುಸಿತದಲ್ಲಿ ಸಿಲುಕಿರುವ ಕುಟುಂಬವನ್ನು ಐಐಟಿ ಮದ್ರಾಸ್ ತಂಡವು ರಕ್ಷಣೆ ಮಾಡಿದೆ. ಎನ್‌ಡಿಆರ್‌ಎಫ್ ಕೂಡ ಕಡಲೂರು ಜಿಲ್ಲೆಯಲ್ಲಿ ಹಲವರನ್ನು ರಕ್ಷಿಸಿದೆ.
ಭಾರೀ ಮಳೆಯ ಎಚ್ಚರಿಕೆ, ಇನ್ನಷ್ಟು ಆತಂಕ
ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡಿನ ನೀಲಗಿರಿ, ಈರೋಡ್, ಕೊಯಮತ್ತೂರು, ತಿರುಪುರ್, ದಿಂಡಿಗಲ್, ಕೃಷ್ಣಗಿರಿ, ಸೇಲಂ, ನಾಮಕ್ಕಲ್, ತಿರುಚ್ಚಿ, ಕರೂರ್, ಮಧುರೈ ಮತ್ತು ಥೇಣಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದ್ದು, ಜನರಿಗೆ ಆತಂಕ ಹೆಚ್ಚಾಗಿದೆ. ಕರ್ನಾಟಕ ಮತ್ತು ನೆರೆಯ ಪ್ರದೇಶಗಳಿಗೆ ‘ಆರೆಂಜ್’ ಅಲರ್ಟ್ ಕೂಡ ನೀಡಲಾಗಿದೆ.
ಅತ್ಯಂತ ಕೆಟ್ಟ ಪೀಡಿತ ಪ್ರದೇಶಗಳಲ್ಲಿ ಒಂದಾದ ಪುದುಚೇರಿಯು 30 ವರ್ಷಗಳಲ್ಲಿ 24 ಗಂಟೆಗಳ ಭಾರೀ ಮಳೆಗೆ ಸಾಕ್ಷಿಯಾಗಿದೆ. 600ಕ್ಕೂ ಜನರನ್ನು ರಕ್ಷಿಸಲಾಗಿದೆ.