ಬೆಂಗಳೂರು: ಪ್ಲಾಸ್ಟಿಕ್ ಹಾಳೆ ಬಳಸಿ ತಯಾರಿಸಿದ ಇಡ್ಲಿ ಅಸುರಕ್ಷಿತ ಎನ್ನುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಅದರ ಬೆನ್ನಲ್ಲೇ, ಪ್ಲಾಸ್ಟಿಕ್ ಬಳಕೆಯನ್ನು ಇಲಾಖೆ ನಿಷೇಧಿಸಿದೆ.
ಈ ಬಗ್ಗೆ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಹಿಂದೆ ಬಟ್ಟೆ ಉಪಯೋಗಿಸಿ ಇಡ್ಲಿ ತಯಾರಿಸುತ್ತಿದ್ದರು. ಪ್ಲಾಸ್ಟಿಕ್ ಹಾಳೆಗಳನ್ನು ಈಗ ಉಪಯೋಗಿಸಲಾಗುತ್ತಿದೆ. ಇಲಾಖೆಯ ಅಧಿಕಾರಿಗಳು 251 ಸ್ಥಳಗಳಲ್ಲಿ ಪರಿಶೀಲಿಸಿ, ಪರೀಕ್ಷೆ ಮಾಡಿದ್ದಾರೆ. 52 ಕಡೆ ಪ್ಲಾಸ್ಟಿಕ್ ಹಾಳೆ ಬಳಸಿ ಇಡ್ಲಿ ಬೇಯಿಸಿರುವುದು ಗಮನಕ್ಕೆ ಬಂದಿದೆ. ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಇರುತ್ತವೆ. ಅದು ಇಡ್ಲಿಗೆ ಸೇರಿ, ಆರೋಗ್ಯಕ್ಕೆ ಅಪಾಯಕಾರಿಯಾಗುವ ಸಂಭವವಿದೆ’ ಎಂದರು.
‘ಪ್ಲಾಸ್ಟಿಕ್ ಹಾಳೆ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ (ಕ್ಯಾನ್ಸರ್‌ಕಾರಕ) ಅಂಶ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇದು ಕ್ಯಾನ್ಸರ್‌ಗೆ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಬಳಕೆಗೆ ಅವಕಾಶವಿಲ್ಲ. ಬಳಸಿದವರ ಮೇಲೆ ದಂಡ ವಿಧಿಸುವುದು ಸೇರಿ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.
‘ಹೋಟೆಲ್, ಉಪಾಹಾರ ಕೇಂದ್ರ ಸೇರಿ ವಿವಿಧೆಡೆ ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಹಾಳೆ ಬಳಕೆ ನಿಷೇಧಿಸಲಾಗಿದೆ. ಎರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗುವುದು’ ಎಂದು ತಿಳಿಸಿದರು.












