ಪುಣೆ:ಮಂಗಳವಾರ ಮುಂಜಾನೆ ನಿಂತಿದ್ದ ಬಸ್ ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯು ತನ್ನ ಸ್ವಗ್ರಾಮದ ಬಳಿಯ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಆತನನ್ನು ಪತ್ತೆ ಹಚ್ಚಲು ಡ್ರೋನ್ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.
ಮಂಗಳವಾರ ಮುಂಜಾನೆ ಸುಮಾರು 5.45ರಿಂದ 6 ಗಂಟೆಯ ನಡುವೆ ನಗರದ ಸ್ವರ್ಗತೆ ಬಸ್ ನಿಲ್ದಾಣದಲ್ಲಿ ಸತಾರ ಜಿಲ್ಲೆಯಲ್ಲಿನ ತನ್ನ ಸ್ವಗ್ರಾಮಕ್ಕೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ಗೃಹಿಣಿಯೊಬ್ಬರನ್ನು ಬಲವಂತವಾಗಿ ಬಸ್ ನಿಲ್ದಾಣದ ಕೊನೆಯಲ್ಲಿ ನಿಂತಿದ್ದ ಖಾಲಿ ಬಸ್ ಒಂದಕ್ಕೆ ಕರೆದೊಯ್ದಿದ್ದ ಆರೋಪಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ.ಆರೋಪಿಯನ್ನು ದತ್ತಾತ್ರೇಯ ರಾಮದಾಸ್ ಗಡೆ ಎಂದು ಗುರುತಿಸಲಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ನಗರದಾದ್ಯಂತ ಬಲೆ ಬೀಸಿದ್ದರೂ, ತಕರಾರಿಗಳನ್ನು ಹೊತ್ತೊಯ್ಯುವ ಟ್ರಕ್ ಒಂದರಲ್ಲಿ ಅವಿತುಕೊಂಡಿದ್ದ ಆತ, ತನ್ನ ಸ್ವಗ್ರಾಮಕ್ಕೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಆತ ಅವಿತುಕೊಂಡಿದ್ದಾನೆ ಎಂದು ಶಂಕಿಸಲಾಗಿರುವ ಕಬ್ಬಿನ ಗದ್ದೆಯಲ್ಲಿ ಪೊಲೀಸರು ಶ್ವಾನ ದಳ ಹಾಗೂ ಡ್ರೋನ್ ಗಳನ್ನು ನಿಯೋಜಿಸಿದ್ದಾರೆ. ಕಬ್ಬಿನ ಜಲ್ಲೆಗಳು ಸುಮಾರು 10 ಅಡಿಯವರೆಗೆ ಬೆಳೆದು ನಿಂತಿರುವುದರಿಂದ, ಶೋಧ ಕಾರ್ಯಾಚರಣೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ಹೀಗಾಗಿ, ಡ್ರೋನ್ ಗಳ ಬಳಕೆ ಅಗತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಆತನನ್ನು ಪತ್ತೆ ಹಚ್ಚುವುದು ಅಸಾಧ್ಯವಾದರೆ, ಪೊಲೀಸರೇ ಖುದ್ದಾಗಿ ಕಬ್ಬಿನ ಗದ್ದೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.ಆರೋಪಿಯ ಪತ್ತೆಗಾಗಿ ಪೊಲೀಸರು ಅಪರಾಧ ವಿಭಾಗದ ಎಂಟು ತಂಡಗಳು ಸೇರಿದಂತೆ ಒಟ್ಟು 13 ವಿಶೇಷ ತಂಡಗಳನ್ನು ರಚಿಸಿದ್ದು, ಅವರು ಆರೋಪಿಯ ಕುಟುಂಬದ ಸದಸ್ಯರು ಹಾಗೂ ಪರಿಚಿತ ಸಹಚರರೊಂದಿಗೂ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಆರೋಪಿಯ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಗೃಹ ಸಚಿವ ಯೋಗೇಶ್ ಕದಂ, ಆರೋಪಿ ಗಡೆಯ ಸಂಭನೀಯ ಅಡಗುತಾಣ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ, ಸಂತ್ರತ್ರ ಮಹಿಳೆಗೆ ನ್ಯಾಯ ದೊರಕಿಸಿಕೊಡುವ ಶಪಥ ಮಾಡಿರುವ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ, ಆರೋಪಿ ಗಡೆ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ಆರೋಪಿಗೆ ಮರಣ ದಂಡನೆ ವಿಧಿಸಬೇಕು ಎಂಬ ತಮ್ಮ ಸಹೋದ್ಯೋಗಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಆಗ್ರಹವನ್ನು ಅವರೂ ಪುನರುಚ್ಚರಿಸಿದ್ದಾರೆ.












