ಪಹಲ್ಗಾಮ್’ನಲ್ಲಿ ಉಗ್ರರ ಗುಂಡಿನ ದಾಳಿ: ಇಬ್ಬರು ಕನ್ನಡಿಗರು ಸೇರಿದಂತೆ 28 ಕ್ಕೂ ಹೆಚ್ಚು ಪ್ರವಾಸಿಗರು ಮೃತ್ಯು.

ಪಹಲ್ಗಾಮ್: ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಕಣಿವೆಗಳಿಂದ ಕೂಡಿದ ಸುಂದರ ಪ್ರವಾಸಿ ತಾಣದಲ್ಲಿ ಮರಗಳ ನಡುವಿನಿಂದ ಬಂದ ಉಗ್ರರು, ಪ್ರವಾಸಿಗರ ರಕ್ತದೋಕುಳಿ ಹರಿಸಿದ್ದಾರೆ. ಕಂಡ ಕಂಡಲ್ಲಿ ವಿಶೇಷವಾಗಿ ಪುರುಷರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಕರ್ನಾಟಕ, ಒಡಿಶಾ ಸೇರಿದಂತೆ ವಿವಿಧ ಕಡೆಗಳಿಂದ ಪ್ರವಾಸಕ್ಕೆ ತೆರಳಿದ್ದ 28ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇವರಲ್ಲಿ ಇಬ್ಬರು ವಿದೇಶಿಗರು ಸೇರಿದ್ದಾರೆ.

ನೋಡ ನೋಡುತ್ತಿದ್ದಂತೆ ಹೆಣಗಳ ರಾಶಿ ಬಿದ್ದಿದ್ದು, ನೋವು, ನರಳಾಟ ಮುಗಿಲುಮುಟ್ಟಿದೆ. ಗುಂಡಿನ ದಾಳಿ ನಡೆದ ಸ್ಥಳದ ವಿಡಿಯೋದಲ್ಲಿ ಅನೇಕರು ಪ್ರಾಣ ಕಳೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ತನ್ನವರನ್ನು ಕಳೆದುಕೊಂಡ ಮಹಿಳೆಯರು ನೋವು, ದು:ಖದಲ್ಲಿ ಅಳುತ್ತಿರುವುದು ಕಂಡುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆ ಹಾಗೂ ವೈದ್ಯಕೀಯ ತಂಡಗಳು ಸಂತ್ರಸ್ತರಿಗೆ ನೆರವಾಗಿದ್ದಾರೆ. ಗಾಯಾಳುಗಳನ್ನು ಕುದುರೆಗಳ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರ ಬಲಿ: ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ಸಾವನ್ನಪ್ಪಿದ್ದಾರೆ. ಆದರೆ ಗುಂಡಿನ ದಾಳಿಯಲ್ಲಿ ಮಂಜುನಾಥ್ ಅವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ.

ಉಗ್ರರ ಕೌರ್ಯವನ್ನು ಸುದ್ದಿವಾಹಿನಿಯೊಂದಕ್ಕೆ ಹಂಚಿಕೊಂಡಿರುವ ಮಂಜುನಾಥ್ ಪತ್ನಿ ಪಲ್ಲವಿ, ನನ್ನ ಪತಿಯ ಕೊಂದ ಉಗ್ರನ ಬಳಿ ನನ್ನ ಪತಿಯನ್ನಷ್ಟೇ ಏಕೆ ಕೊಂದೆ? ನನ್ನನ್ನೂ ನನ್ನ ಮಗನನ್ನೂ ಕೊಂದುಬಿಡು ಎಂದು ಛಿ ಮಾರಿ ಹಾಕಿದ್ದಾರೆ. ಇದಕ್ಕೆ ತಣ್ಣಗೆ ಉತ್ತರಿಸಿರುವ ಉಗ್ರ ಹೋಗಿ ಇದನ್ನು ಮೋದಿಗೆ ಹೇಳು, ನಿಮ್ಮಿಬ್ಬರನ್ನೂ ಜೀವ ಸಹಿತ ಬಿಡುತ್ತಿದ್ದೇನೆ ಎಂದು ಹೇಳಿ ಪರಾರಿಯಾಗಿದ್ದಾನೆ” ಎಂದು ಹೇಳಿದ್ದಾರೆ.

ಮತ್ತೋರ್ವ ಕನ್ನಡಿಗನ ಹತ್ಯೆ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಮತ್ತೋರ್ವ ಕನ್ನಡಿಗನ ಹತ್ಯೆಯಾಗಿದೆ. ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿ ಮೂಲದ ಭರತ್ ಭೂಷಣ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ಶಾಂತಯುತವಾಗಿದೆ ಎನ್ನಲಾಗುತ್ತಿದ್ದ ಕಣಿವೆ ಪ್ರದೇಶದಲ್ಲಿ ಇದು ಕಳೆದ 30 ವರ್ಷದಲ್ಲಿ ನಡೆದ ಅತ್ಯಂತ ದೊಡ್ಡ ದಾಳಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ದಾಳಿಯನ್ನು ನೋಡಿರಲಿಲ್ಲ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ದಾಳಿಯಾದ ಕೆಲ ತಾಸುಗಳ ನಂತರ ಸದ್ಯ ಸೌದಿ ಅರೇಬಿಯಾದ ಜೆದ್ದಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದು, ಶ್ರೀನಗರಕ್ಕೆ ಭೇಟಿ ನೀಡುವಂತೆ ತಿಳಿಸಿದ್ದಾರೆ. ದಾಳಿಯನ್ನು ಖಂಡಿಸಿರುವ ಪ್ರಧಾನಿ ಮೋದಿ, ಬಿಜೆಪಿ ನೇತೃತ್ವದ ಕೇಂದ್ರದ ಭಯೋತ್ಪಾದನೆ ವಿರುದ್ಧದ ಹೋರಾಟದ ಸಂಕಲ್ಪ ಅಚಲವಾಗಿದೆ ಎಂದು ಗುಡುಗಿದ್ದಾರೆ.