ಉಡುಪಿ: ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದ ವೃದ್ಧ ದಂಪತಿಗಳು ತಮ್ಮ ಮನೆಗೆ ತಲುಪಲು ಏಕೈಕ ದಾರಿಯಾಗಿರುವ ಶಿಥಿಲಗೊಂಡ ಕಾಲು ಸಂಕವನ್ನೇ ಅವಲಂಬಿಸಿದ್ದಾರೆ. ಇವರ ಈ ದುಸ್ಥಿತಿಯನ್ನು ವೀಕ್ಷಿಸಿ ತಹಶಿಲ್ದಾರ್ ಪ್ರತಿಭಾ ಹೊಸ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.
ಪ್ರತಿದಿನ ಈ ವೃದ್ದ ದಂಪತಿಗಳು ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕದ ಮೇಲೆಯೇ ಬರಬೇಕು.ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ ವಸಂತಿ (70 ವರ್ಷ) ಹಾಗೂ ಭೋಜ ಸಾಲ್ಯಾನ್ (74 ವರ್ಷ) ಅವರು ನಡೆದಾಡಬೇಕಾದ ಪರಿಸ್ಥಿತಿ ಇದೆ.
ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆ ಬೀದಿಗೆ ಬರಲು, ಇನ್ಯಾವುದೇ ಕೆಲಸಕ್ಕೂ ಈ ಬೀಳುವಂತಿರುವ ಹಲಗೆಯ ಮೇಲೆಯೇ ಜೀವ ಕೈಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಈ ಪರಿಸ್ಥಿತಿ ಗಮನಿಸಿದ ತಹಶೀಲ್ದಾರ್ ನಾನೂ ಸ್ವತಃ ಈ ಹಲಗೆಯ ಮೇಲೆ ನಡೆದು ಬಂದೆ, ನಿಜಕ್ಕೂ ಭಯವಾಯಿತು ಎಂದಿದ್ದಾರೆ.
ಶಿಥಿಲಗೊಂಡ ಮರದ ಹಲಗೆಯ ಮೇಲೆ ನಡೆದುಕೊಂಡು ಬಂದು ತಮ್ಮ ನಿತ್ಯದ ಅಗತ್ಯ ಪೂರೈಸಿಕೊಳ್ಳಬೇಕಾದ ಪರಿಸ್ಥಿತಿ ಈ ವೃದ್ಧ ದಂಪತಿಗಳದ್ದು. ಇವರಿಗೆ ಓಡಾಡಲು, ಸುಭದ್ರ ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಸಂಬಂಧಪಟ್ಟ ಇಲಾಖೆ ಮತ್ತು ಯಾರಾದರೂ ದಾನಿಗಳ ಸಹಕಾರದಿಂದ ಇದನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.