ಪರ್ಕಳ ಮಹಾಲಿಂಗೇಶ್ವರ ಮಹಾಣಗಣಪತಿ ದೇವಸ್ಥಾನ: ಮೇ11ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ, ಧಾರ್ಮಿಕ-ಸಾಂಸ್ಕೃತಿಕ ವೈಭವ.

ಉಡುಪಿ: ಪರ್ಕಳದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ- ಮಹಾಗಣಪತಿ, ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ.27ರಿಂದ ಮೇ 11ರವರೆಗೆ ಕ್ಷೇತ್ರಾಧಿಪತಿ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ.

ಏ.27ರಂದು ಸಂಜೆ 4 ಗಂಟೆಗೆ ಪರ್ಕಳದ ವಿಶ್ವೇಶ್ವರ ಸಭಾಭವನದ ಬಳಿಯಿಂದ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ಬರಲಿದೆ. ಸಂಜೆ 6 ಗಂಟೆಗೆ ಮಣಿಪಾಲದ ಮಹೇಶ ಭಂಡಾರಿ ಮತ್ತು ಬಳಗದಿಂದ ಭಕ್ತಿ, ಜಾನಪದ ಗೀತಾ ವೈಭವ ನಡೆಯಲಿದೆ. ಏ.28, 29 ಮತ್ತು 30ರಂದು ಬೆಳಗ್ಗೆ 9ರಿಂದ ವಿವಿಧ ವೈದಿಕ ವಿಧಿ-ವಿಧಾನಗಳು ನಡೆಯಲಿದೆ. ಸಂಜೆ 5ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಮೇ 1ರಂದು ಸಂಜೆ 5ಕ್ಕೆ ನಡೆಯಲಿರುವ ಸುಧರ್ಮ ಸಭೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಶಾಸಕ ಯಶ್ ಪಾಲ್‌ ಸುವರ್ಣ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಭಾಗವಹಿಸಲಿದ್ದಾರೆ. ಮೇ 2ರಂದು ಸಂಜೆ 5.30ಕ್ಕೆ ಶ್ರೀಕ್ಷೇತ್ರ ಕಲ್ಲಂಗಳದ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಕರಸೇವಾಭಿನಂದನಂ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ದಿಕ್ಯೂಚಿ ಭಾಷಣ ಮಾಡಲಿದ್ದಾರೆ. ಮೇ 3ರಂದು ಸಂಜೆ 5:30ಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಮಾತೃ ಸಂಗಮ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ.

ಮೇ 4ರಂದು ಸಂಜೆ 5:30ಕ್ಕೆ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥರು ಆಶೀರ್ವಚನ ನೀಡಲಿದ್ದಾರೆ. ದೇವಳ ಜೀಣೋರ್ದ್ಧಾರ ಸಮಿತಿ ಅಧ್ಯಕ್ಷ ಬಿ.ಜಯರಾಜ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮೇ 5ರಂದು ಸಂಜೆ 5ಕ್ಕೆ ಧರ್ಮದರ್ಶಿ ಸಮಾವೇಶ ಜರುಗಲಿದೆ. ಮೇ 6ರಂದು ಭಜನಾ ಏಕಾಹ, ಮೇ 7ರಂದು ಧ್ವಜಾರೋಹಣ, ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ, ಮೇ 8ರಂದು ಬೈಗಿನ ಬಲಿ ನಡೆಯಲಿದೆ.

ಮೇ 9ರಂದು ರಾತ್ರಿ 8ಕ್ಕೆ ಮಹಾನ್ ರಥೋತ್ಸವ, ಮೇ 10ರಂದು ಭಕ್ತರಿಂದ ತುಲಾಭಾರ ಸೇವೆ, ರಾತ್ರಿ ವ್ಯಾಘ್ರ ಚಾಮುಂಡಿ ಕೋಲ, ಮೇ 11ರಂದು ಮಹಾ ಸಂಪ್ರೋಕ್ಷಣೆ, ರಾತ್ರಿ ಗೋಂದುಲು ಮಾರಿ ಕಾರ್ಯಕ್ರಮ ಜರುಗಲಿದೆ.