ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ‘ಕೃತಕ ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ: ಒಂದು ಚರ್ಚೆ’ ಕಾರ್ಯಕ್ರಮವನ್ನು ಉಡುಪಿ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಭೂಗರ್ಭ ಶಾಸ್ತ್ರಜ್ಞ ಡಾ.ಉದಯ ಶಂಕರ್ ಅವರು, ಪಶ್ಚಿಮಘಟ್ಟದ ಉದ್ದಕ್ಕೂ ಭೂಕುಸಿತ ಆಗಿದೆ. ಚಿಕ್ಕಮಗಳೂರು, ವಯನಾಡು, ಮಡಿಕೇರಿ, ಚಿಕ್ಕಮಗಳೂರು ಹಾಗೂ ಅಂಕೋಲಾ ಈ ಮೊದಲಾದ ಕಡೆ ಭೂಕುಸಿತ ಉಂಟಾಗಿದೆ. ರಾಕ್ಷಸ ರೀತಿಯಲ್ಲಿ ಕೆಲಸ ಮಾಡುವ ಬುಲ್ಡೊಜರ್, ಜೆಸಿಬಿಗಳ ಘರ್ಜನೆಯೇ ಇದಕ್ಕೆ ಮುಖ್ಯ ಕಾರಣ ಎಂದರು.
ಜನರು ಎತ್ತರದ ಪ್ರದೇಶಗಳಲ್ಲಿ ಅಭಿವೃದ್ದಿ ಚಟುವಟಿಕೆ ಮಾಡುತ್ತಿದ್ದಾರೆ. ಕೃಷಿ, ರಿಯಲ್ ಎಸ್ಟೇಟ್ ಹಾಗೂ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗೆ, ಇದಕ್ಕೆ ಬೇಕಾದ ರೀತಿಯಲ್ಲಿ ಮಣ್ಣನನ್ನು ಅಗೆಯುತ್ತಿದ್ದಾರೆ. ಅದೇ ರೀತಿ ಎತ್ತಿನಹೊಳೆ, ಆಗುಂಬೆ ಸುರಂಗ ಮಾರ್ಗ ಯೋಜನೆ ಹಾಗೂ ಕೊಲ್ಲೂರಿನ ಕೊಡಚಾದ್ರಿ ರೋಪ್ ವೇ ಈ ಮೊದಲಾದ ಸರಕಾರದ ಯೋಜನೆಗಳು ಕೂಡ ಅತ್ಯಂತ ಹೆಚ್ಚು ಮಳೆ ಬೀಳುವ ಪಶ್ಚಿಮಘಟ್ಟದಲ್ಲಿ ಆಗುತ್ತಿದೆ. ಇದರಿಂದಾಗಿ ಮಳೆ ಬಂದಾಗ ನೀರು ಭೂಮಿಯೊಳಗೆ ಪ್ರವೇಶಿಸಲು ಭಾರಿ ಸುಲಭ ಆಗುತ್ತದೆ. ದಟ್ಟ ಕಾಡಿನಿಂದಾಗಿ ಮಳೆ ನೀರು ನಿಧಾನವಾಗಿ ಇಂಗಿ ನಮ್ಮ ನದಿಗಳನ್ನು ಪೋಷಿಸಿ, ಇಡೀ ವರ್ಷಪೂರ್ತಿ ನೀರು ಹರಿಯುವಂತೆ ಮಾಡುತ್ತದೆ. ಅಲ್ಲಿ ಇವತ್ತು ಹೇರಳವಾಗಿ ನೀರು ಒಳಗೆ ಸೇರುತ್ತಿದೆ. ಇದರಿಂದಲೇ ಇಂತಹ ಭೂಕುಸಿತ ಉಂಟಾಗಲು ಕಾರಣ ಎಂದು ಅಭಿಪ್ರಾಯಪಟ್ಟರು.
ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಉಡುಪಿ ಜಿಲ್ಲಾ ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಸ್ವಾಗತಿಸಿದರು. ಪತ್ರಕರ್ತರಾದ ಅಜಿತ್ ಅರಾಡಿ ವಂದಿಸಿದರು. ದೀಪಕ್ ಜೈನ್ ನಿರೂಪಿಸಿದರು.