ಪಡುಬಿದ್ರೆ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಅಸಭ್ಯ ಫೋಟೊ ಶೂಟ್ ವಿವಾದ: ಪೊಲೀಸ್ ಇಲಾಖೆ ಸ್ಪಷ್ಟನೆ.

ಉಡುಪಿ: ಪಡುಬಿದ್ರೆ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಫೋಟೊ ಶೂಟ್ ವಿವಾದಕ್ಕೆ ಸಂಬಂಧಿಸಿದಂತೆ ಒಬ್ಬ ಯುವತಿ ಹಾಗೂ ಯುವಕ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದು, ಅದರಂತೆ ಬೀಟ್ ಕರ್ತವ್ಯದಲ್ಲಿದ್ದ ಎಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಪಡುಬಿದ್ರೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.

ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಯುವಕ ಹಾಗೂ ಯುವತಿಯನ್ನು ಕರೆದು ಬ್ಲೂಫ್ಲ್ಯಾಗ್ ಬೀಚ್ ವಸತಿ ಪ್ರದೇಶವಾಗಿರುವ ಬಗ್ಗೆ ಮನವರಿಕೆ ಮಾಡಿದ್ದು, ಅವರು ಅಲ್ಲಿಂದ ತೆರಳಿದ್ದರು. ಅಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸ್ ಸ್ಪಷ್ಟನೆಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಯುವತಿಯನ್ನು ಸಂಪರ್ಕಿಸಿ, ಅವರಿಗೆ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ನೀಡುವಂತೆ ತಿಳಿಸಲಾಗಿದೆ. ಈ ಬಗ್ಗೆ ಅವರಿಂದ ಯಾವುದೇ ದೂರು ಬಂದಲ್ಲಿ ಕಾನೂನಿನಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ತಿಳಿಸಿದೆ.

ಬೀಚ್‌ ನಲ್ಲಿ ಬಿಕಿನಿ ಫೋಟ್‌ಶೂಟ್:

ಕ್ಯಾಥಿಶ್ರೀ ಎಂಬ ಸೋಷಿಯಲ್ ಮಿಡಿಯಾ ಇನ್‌ಫುಯೆನ್ಸರ್ ಯುವತಿ ಪಡುಬಿದ್ರಿ ಬೀಚ್‌ ನಲ್ಲಿ ಬಿಕಿನಿಯಲ್ಲಿ ಫೋಟ್‌ಶೂಟ್ ನಡೆಸಿದ್ದು, ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಬಂದು ಅದಕ್ಕೆ ಅಡ್ಡಿಯನ್ನುಂಟು ಮಾಡಿದ್ದಾರೆ ಎಂದು ಆಕೆ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದಿದ್ದಾಳೆ.

ಪಡುಬಿದ್ರೆ ಬೀಚ್‌ನಲ್ಲಿ ನನಗೆ ಕಹಿ ಅನುಭವವಾಗಿದೆ ಎಂದು ಬರೆದುಕೊಂಡಿರುವ ಆಕೆ, ಬಟ್ಟೆ ಬದಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಇಲ್ಲದಿದ್ದರೆ ಸ್ಥಳೀಯರು ಹಲ್ಲೆ ನಡೆಸಲಿದ್ದಾರೆ ಎಂದೂ ಬೆದರಿಸಿದ್ದಾರೆ. ನೈತಿಕ ಪೊಲೀಸ್‌ಗಿರಿ ಮಾಡಲು ಸ್ಥಳೀಯರು ಯಾರು? ಬೀಚ್‌ನಲ್ಲಿ ಫೋಟೊಶೂಟ್ ಮಾಡಿದರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೊಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ ಎಂದು ಆಕೆ ಪ್ರಶ್ನಿಸಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ 7 ಲಕ್ಷ ಫಾಲೋವರ್ಸ್ ಇದ್ದಾರೆ. ಘಟನೆ ವಾರದ ಹಿಂದೆ ನಡೆದಿದ್ದು, ವೀಡಿಯೊವನ್ನು ಆಕೆ ನಿನ್ನೆಯಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ.