ನ.18ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ಉದ್ಘಾಟನೆ

ಉಡುಪಿ: ಉಭಯ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ಗಳ ನೇತೃತ್ವದಲ್ಲಿ ‘ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು’ ಎಂಬ ವಿಷಯದೊಂದಿಗೆ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಮಂಗಳೂರಿನ ಉರ್ವಾ ಕ್ರಿಕೆಟ್ ಮೈದಾನದಲ್ಲಿ ನ. 18ರಂದು ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ವಸ್ತುಪ್ರದರ್ಶನ ಮಳಿಗೆಗಳನ್ನು ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ ದೇವೇಗೌಡ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಶಾಸಕರಾದ ಡಾ. ವೈ ಭರತ್‌ ಶೆಟ್ಟಿ, ಯಶ್‌ಪಾಲ್ ಸುವರ್ಣ, ದ.ಕ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಸಹಕಾರ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌, ಸಹಕಾರ ಸಂಘಗಳ ನಿಬಂಧಕ ಡಾ. ಕೆ. ರಾಜೇಂದ್ರ, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮಂಗಳೂರಿನ ಉರ್ವಾ ಕ್ರಿಕೆಟ್ ಮೈದಾನದಲ್ಲಿ ಸಹಕಾರ ಜಾಥ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರದ ಸಹಕಾರಿ ಟ್ಯಬ್ಲೊಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.