ಉಡುಪಿ: ತಾಂತ್ರಿಕ ಉದ್ಯೋಗ ನೇಮಕಾತಿ ಸಂಸ್ಥೆ “ಎಕ್ಸ್ ಫೀನೋ” (Xpheno) ಇದರ ರಾಜ್ಯದ ಎರಡನೇ ಹಾಗೂ ಕರಾವಳಿಯ ಪ್ರಪ್ರಥಮ “ಎಕ್ಸ್ ಫೀನೋ ಶ್ರೇಷ್ಠತಾ ಕೇಂದ್ರ” ಉಡುಪಿಯ ಕುಂಜಿಬೆಟ್ಟುವಿನಲ್ಲಿ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭ ನಾಳೆ (ಸೆ.17) ನಡೆಯಲಿದೆ ಎಂದು ಸಹ ಸ್ಥಾಪಕ ಐರೋಡಿ ಕಮಲ್ ಕಾರಂತ್ ಹೇಳಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ-ಮಂಗಳೂರು ಪ್ರದೇಶದ ಪ್ರತಿಭಾವಂತರಿಗೆ ಉದ್ಯೋಗಾವಕಾಶದ ಬಗ್ಗೆ ಮಾರ್ಗದರ್ಶನ ನೀಡಲಿದೆ. ಸಂಸ್ಥೆಯು ಸ್ಥಳೀಯ ಪ್ರತಿಭಾವಂತರನ್ನು ತರಬೇತಿಗೊಳಿಸಿ ಜಾಗತಿಕ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿಕೊಡಲಿದೆ ಎಂದರು.
ಈ ಶ್ರೇಷ್ಠತಾ ಕೇಂದ್ರದಲ್ಲಿ 250 ಸ್ಥಳೀಯ ಪದವೀಧರರನ್ನು ಕ್ರಮೇಣವಾಗಿ ನಿಯುಕ್ತಿಸಲು ಉದ್ದೇಶಿಸಿದೆ. ಈ ತಂಡವು ಪ್ರಾದೇಶಿಕ ಪ್ರತಿಭೆಯನ್ನು ಬಹುರಾಷ್ಟ್ರೀಯ ಮತ್ತು ಜಾಗತಿಕ ಸಂಸ್ಥೆಗಳಿಗೆ ಸಂಪರ್ಕಿಸಲು ಸಹಾಯ ಮಾಡಲಿದೆ. ಉಡುಪಿ-ಮಂಗಳೂರು ಪ್ರದೇಶದಲ್ಲಿ ಪ್ರಾದೇಶಿಕ ವೃತ್ತಿಪರರಿಗೆ ಹೆಚ್ಚಿನ ಗುಣಮಟ್ಟದ ಉದ್ಯೋಗ ಅವಕಾಶಗಳನ್ನು ಒದಗಿಸುವುದರೊಂದಿಗೆ, ದೊಡ್ಡ ನಗರಗಳಿಗೆ ವಲಸೆ ಹೋಗಬೇಕಾದ ಅಗತ್ಯವನ್ನು ತಪ್ಪಿಸಲು ನೆರವು ನೀಡಲಿದೆ. ಮೊದಲ ಹಂತದಲ್ಲಿ 120 ವೃತ್ತಿಪರರನ್ನು ನೇಮಕ ಮಾಡಿ ಅವರಿಗೆ ಆಧುನಿಕ ತರಬೇತಿ ನೀಡಲಾಗವುದು. ಎರಡನೇ ಹಂತದಲ್ಲಿ 250 ಪದವೀಧರರಿಗೆ ಉಡುಪಿ ಕೇಂದ್ರದಲ್ಲಿ ಕ್ರಮೇಣವಾಗಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹ-ಸ್ಥಾಪಕ ಎತನೂರ್ ಅನಿಲ್, ಕೇಂದ್ರದ ಮುಖ್ಯಸ್ಥ ಗುರುಪ್ರಸಾದ್ ಉಪಸ್ಥಿತರಿದ್ದರು.












