ನಾಳೆ (ಅ.17) ಉಡುಪಿ ಕೃಷ್ಣಮಠದಲ್ಲಿ 100 ಭರತನಾಟ್ಯ ಕಲಾವಿದರಿಂದ 14 ಗಂಟೆ ನಿರಂತರ ನೃತ್ಯ ಪ್ರದರ್ಶನ

ಉಡುಪಿ: ಅಭಿಘ್ನ ನೃತ್ಯಾಲಯಂ ಸಂಸ್ಥೆ ವತಿಯಿಂದ ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ಸಹಯೋಗದೊಂದಿಗೆ ನಾಳೆ (ಅ.17) ಶ್ರೀಕೃಷ್ಣಮಠದ ಮಧ್ವಮಂಟದಲ್ಲಿ ಹಾಗೂ ರಾಜಾಂಗಣದಲ್ಲಿ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ 100 ಮಂದಿ 14 ಗಂಟೆಗಳ ನಿರಂತರ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ ಎಂದು ಅಭಿಘ್ನ ನೃತ್ಯಾಲಯಂ ಸಂಸ್ಥೆ ಮುಖ್ಯಸ್ಥೆೆ, ಕಾರ್ಯಕ್ರಮ ಸಂಚಾಲಕಿ ಚಂದ್ರಬಾನು ಚತುರ್ವೇದಿ ತಿಳಿಸಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಬಾದ್, ಚೆನ್ನೈ, ವಿಜಯವಾಡ, ಬೆಂಗಳೂರು ಸಹಿತ ವಿವಿಧ ಭಾಗಗಳ ಐದು ವರ್ಷದಿಂದ 60 ವರ್ಷದವರೆಗಿನ ಭರತನಾಟ್ಯ ಕಲಾವಿದರು ಭಾಗವಹಿಸಲಿದ್ದಾರೆ. ಬೆಳಿಗ್ಗೆೆ 8ರಿಂದ ನಿರಂತರ 14 ಗಂಟೆಗಳ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ ದಾಖಲೆಗಾಗಿ ಈ ನೃತ್ಯವನ್ನು ಆಯೋಜಿಸಲಾಗಿದೆ. ಬೆಳಿಗ್ಗೆೆಯಿಂದ ಸಂಜೆವರೆಗೆ ಮಧ್ವಮಂಟಪದಲ್ಲಿ ಹಾಗೂ ಸಂಜೆ ಬಳಿಕ ರಾಜಾಂಗಣದಲ್ಲಿ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದರು.

ನ.17ರಂದು ಬೆಳಿಗ್ಗೆೆ 8 ಗಂಟೆಗೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ನೃತ್ಯ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ದಕ್ಷಿಣ ಭಾರತದ ಖ್ಯಾತ ನೃತ್ಯ ಗುರುಗಳಾದ ಅಶ್ವಥ್ ನಾರಾಯಣ ಸ್ವಾಮೀಜಿ, ಕಂಠಶಾಲ ಪವನ್‌ಕುಮಾರ್ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಮ್ಮ ಸಂಸ್ಥೆ ಕಳೆದ 20 ವರ್ಷಗಳಿಂದ ದೇಸಿ ನೃತ್ಯ, ಭರತನಾಟ್ಯ ಕಲೆಗಳ ತರಬೇತಿಯನ್ನು ನಡೆಸಿಕೊಂಡು ಬರುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ ಸಹಿತ ದಕ್ಷಿಣ ಭಾರತದಲ್ಲಿ ಗಿನ್ನೆೆಸ್ ಬುಕ್, ಲಿಮ್ಕಾ ರೆಕಾರ್ಡ್ ನಂಥ ದಾಖಲೆಕೂಟಗಳನ್ನು ಆಯೋಜಿಸಿ ಪ್ರಮಾಣಪತ್ರ ಪಡೆದಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರ ಆಚಾರ್ಯ ಮತ್ತು ಚಂದ್ರ ಮೋಹನ್ ಇದ್ದರು.