ನಾಗಮಂಗಲ ಗಣಪತಿ ಸಂಘಟಕರ ಮೇಲೆ ಎಫ್ ಐಆರ್ ದಾಖಲಿಸಿರುವುದು ಅತ್ಯಂತ ಖಂಡನೀಯ

ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರ ನಾಗಮಂಗಲ ಗಣಪತಿ ಸಂಘಟಕರ ಮೇಲೆ ಎಫ್ ಐಆರ್ ದಾಖಲಿಸಿರುವುದು ಅತ್ಯಂತ ಖಂಡನೀಯ. ಹಿಂದೂ ಯುವಕರು ಹಿಂದೂ ವಿಚಾರದಲ್ಲಿ ಹೋರಾಟ, ಮೆರವಣಿಗೆ ಮಾಡಬಾರದೆಂದು ನೈತಿಕ ಸ್ಥೈರ್ಯ ಕುಗ್ಗಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯದ ಸಂಪ್ರದಾಯದ ಬಗ್ಗೆ ಹೆಚ್ಚು ಒಳವು ಹೊಂದಿರುವ ಕಾಂಗ್ರೆಸ್ ಗೆ ಹಿಂದೂ‌ ಸಂಪ್ರದಾಯದ ಬಗ್ಗೆ ಯಾಕಿಷ್ಟು ಕೀಳರಿಮೆ?. ಗಣಪತಿ ಸಂಘಟನೆಯ ಅಧ್ಯಕ್ಷರನ್ನು ನಂಬರ್ ಒನ್ ಆರೋಪಿ ಮಾಡುತ್ತಾರೆ. ಸಂಘಟನೆಯ ಇತರ ಪದಾಧಿಕಾರಿಗಳನ್ನು ಎರಡರಿಂದ 25ನೇ ವರೆಗಿನ ಆರೋಪಿಗಳನ್ನಾಗಿ ಮಾಡಿದ್ದಾರೆ. ಅದೇ ಮೆರವಣಿಗೆ ಕಲ್ಲು ತೂರಾಟ ಮಾಡಿ ಹಿಂಸಾಚಾರ ನಡೆಸಿದವರನ್ನು 26, 27ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಇದು ಯಾವ ನ್ಯಾಯ ಎಂದು‌ ಪ್ರಶ್ನಿಸಿದರು.

ಗಣಪತಿ ಸಂಘಟಕರ ಮೇಲೆ ದಾಖಲಿಸಿರುವ ಎಫ್ ಐಆರ್ ಅನ್ನು ತಕ್ಷಣ ರದ್ದು ಮಾಡಬೇಕು. ಹಾನಿಗೊಳಗಾದ ಅಂಗಡಿ ಮುಗ್ಗಟ್ಟುಗಳ ಮಾಲೀಕರಿಗೆ ತಕ್ಷಣ ಪರಿಹಾರ ನೀಡಬೇಕು. ತಪ್ಪಿತಸ್ಥರನ್ನು ತಕ್ಷಣವೇ ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು‌ ಎಂದು ಒತ್ತಾಯಿಸಿದರು.


ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ನೋವಾದಾಗ ತಕ್ಷಣ ಸ್ಪಂದಿಸುತ್ತಾರೆ. ಆದರೆ, ನಾಗಮಂಗಲ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರೆ ಅಲ್ಪಸಂಖ್ಯಾತರಿಗೆ ನೋವಾಗೊತ್ತೋ ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಇನ್ನೂ ಭೇಟಿ ನೀಡಿಲ್ಲ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ದಿಲೇಶ್ ಶೆಟ್ಟಿ, ಸಹ ಸಂಯೋಜಕ ಶಂಕರ ಅಂಕದಕಟ್ಟೆ ಉಪಸ್ಥಿತರಿದ್ದರು.