ಉಡುಪಿ: ಭಯೋತ್ಪಾದನೆಯನ್ನು ಇದುವರೆಗೆ ಮಾನಸಿಕ ಸಮಸ್ಯೆ ಎಂದು ತಿಳಿದಿದ್ದೆವು. ಉಗ್ರರು ಎಲ್ಲೆಂದರಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಹಾಕುತ್ತಿದ್ದರು. ಆದರೆ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಿಂದೂಗಳನ್ನು ಗುರಿಯಾಗಿಸಿದ್ದು, ಬಹಳಷ್ಟು ಕಳವಳಕಾರಿಯಾಗಿದೆ. ಇದೊಂದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ಪುತ್ತಿಗೆ ಸುಗುಣೇಂದ್ರ ಶ್ರೀಗಳು ಹೇಳಿದ್ದಾರೆ.
ಕೃಷ್ಣಮಠದ ಗೀತಾಮಂದಿರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಧರ್ಮಾಧಾರಿತ ಭಯೋತ್ಪಾದನೆ ಎಂಬುದು ಬಹಳಷ್ಟು ಆತಂಕಕಾರಿ. ಇದಕ್ಕೆ ಕೇಂದ್ರ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಭಾರತ-ಪಾಕಿಸ್ಥಾನದ ನಡುವೆ ಯುದ್ಧ ಬೇಕೋ, ಬೇಡವೋ ಎಂಬ ಬಗ್ಗೆ ಕೇಂದ್ರ ಸರಕಾರ ಹಾಗೂ ರಕ್ಷಣಾ ಸಚಿವರು ನಿರ್ಧರಿಸಬೇಕು. ಜತೆಗೆ ಗಡಿ ಭದ್ರತೆಗೆ ಮತ್ತಷ್ಟು ವಿಶೇಷ ಪ್ರಾಶಸ್ತ್ಯ ನೀಡಬೇಕು. ಇಲ್ಲದಿದ್ದರೆ ದೇಶದ ಪ್ರಗತಿಗೂ ಹೊಡೆತ ಬೀಳಲಿದೆ ಎಂದು ಪುತ್ತಿಗೆ ಸ್ವಾಮೀಜಿ ನುಡಿದರು.












