ದೇಶಪ್ರೇಮವನ್ನು ಮತ್ತಷ್ಟು ಜಾಗೃತಗೊಳಿಸಲಿ ಸ್ವಾತಂತ್ರ್ಯ ದಿನ: ತೃಪ್ತಿ ಗುಡಿಗಾರ್ ಬರೆದ ಸ್ವಾತಂತ್ರ್ಯೋತ್ಸವದ ವಿಶೇಷ ಬರಹ

-ತೃಪ್ತಿ ಗುಡಿಗಾರ್ ದ್ವಿತೀಯ ಬಿ.ಎ ಪತ್ರಿಕೋದ್ಯಮ ವಿಭಾಗ ಎಂ. ಪಿ.ಎಂ ಕಾಲೇಜು, ಕಾರ್ಕಳ

ಈ ಬಾರಿ ನಮ್ಮ ದೇಶದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗೌರವಯುತವಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ ದೊರೆಯಲು ಹಲವಾರು ಹೋರಾಟಗಾರರ ತ್ಯಾಗದ ಫಲವಾಗಿ 1947 ಆಗಸ್ಟ್ 15ರಂದು ಬ್ರಿಟಿಷರ ಕಗ್ಗೋಲೆಯಿಂದ ಭಾರತಮಾತೆಯನ್ನು ಹೊರತರಲಾಯಿತು. ಈ ದಿನವನ್ನು ದೇಶಕ್ಕಾಗಿ ಮಡಿದ ಹುತಾತ್ಮರನ್ನು ನಾವು ಸ್ಮರಿಸುವ ಏಕೈಕ ದಿನ ಮಾತ್ರವಲ್ಲದೆ, ಭಾರತೀಯರ ಸಾಂಸ್ಕೃತಿಕ ವಿಭಿನ್ನತೆಗಳನ್ನು ಮರೆತು ನಿಜವಾದ ಭಾರತೀಯರಾಗಿ ಒಂದಾಗುವ ಏಕೈಕ ದಿನವಾಗಿದೆ.

ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ದೇಶದ ರಾಷ್ಟ್ರ ಧ್ವಜವನ್ನು ಹಾರಿಸಲು ಮತ್ತು ನಮ್ಮ ರಾಷ್ಟ್ರಗೀತೆಯನ್ನು ಹಾಡುವುದೇ ಒಂದು ರೀತಿಯಾದ ಹೇಳತೀರದ ಖುಷಿಯೋ ಖುಷಿ. ನಮ್ಮಲ್ಲಿ ದೇಶಭಕ್ತಿ ಮತ್ತು ನಮ್ಮ ದೇಶದ ಮೇಲಿನ ಪ್ರೀತಿಯ ಭಾವನೆಯನ್ನು ತುಂಬಲು ಈ ಸ್ವಾತಂತ್ರ್ಯ ದಿನವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದಿನ ಜನತೆಯು ಹೋರಾಟಗಾರರ ತ್ಯಾಗದ ಫಲವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ. ಸಿಕ್ಕಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಇತರರ ಸ್ವತಂತ್ರಕ್ಕೆ ತೊಡಕನ್ನು ಉಂಟು ಮಾಡುತ್ತಿದ್ದಾರೆ.

ಸ್ವಾತಂತ್ರಕ್ಕಾಗಿ ಹೋರಾಡಿದ ಹಾಗೂ ಪ್ರಾಣತೆತ್ತ ಎಲ್ಲಾ ದೇಶಭಕ್ತರು ನಮ್ಮ ದೇಶವು ಸ್ವತಂತ್ರದೊಂದಿಗೆ ಶಾಂತಿಯುತವಾಗಿ ಇರಬೇಕೆಂದು ಬಯಸಿದ್ದರು. ಆದರೆ ಕೆಲವೆಡೆ ಭ್ರಷ್ಟಾಚಾರ, ಕೋಮುಗಲಭೆಯಿಂದ ಶಾಂತಿ ಎಂಬುವ ವಾತಾವರಣವಿಲ್ಲವೆಂಬಂತಿದೆ. ನಮ್ಮ ದೇಶದ ಯುವ ನಾಗರಿಕರಿಗೆ ರಾಷ್ಟ್ರವನ್ನು ಬದಲಾಯಿಸುವ ಸಾಮರ್ಥ್ಯವಿದೆ. ಮುಂದಿನ ಭವಿಷ್ಯವು ಯುವ ಪೀಳಿಗೆಯ ಮೇಲೆ ಅವಲಂಬಿತವಾಗಿದೆ.

ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯ ಮತ್ತು ದೇಶವನ್ನು ಉತ್ತಮಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ ಸ್ವಾತಂತ್ರ್ಯ ದಿನಾಚರಣೆಯ ಪ್ರಮುಖ ಉದ್ದೇಶವೆಂದರೆ ನಮ್ಮ ಯುವ ನಾಗರಿಕರಿಗೆ ದೇಶಪ್ರೇಮವನ್ನು ಜಾಗೃತಗೊಳಿಸುವುದಾಗಿರುತ್ತದೆ.ಈ ಸ್ವಾತಂತ್ರ್ಯ ದಿನ ನಮ್ಮೊಳಗಿನ ದೇಶಪ್ರೇಮವನ್ನು ಮತ್ತಷ್ಟು ಬಡಿಗೆಬ್ಬಿಸಲಿ.