ದುಗ್ಲಿಪದವು: ವೇಷ ಧರಿಸಿ ಸಂಗ್ರಹಿಸಿದ ಮೊತ್ತವನ್ನು ಬಾಲಕನ ಚಿಕಿತ್ಸೆಗೆ ವಿತರಣೆ

ಉಡುಪಿ: ಟೀಂ ಯುವ ಟೈಗರ್ಸ್ ಮತ್ತು ಯುವ ಸೇವಾ ಸಂಘ ದುಗ್ಲಿಪದವು ಮಂಚಿ ಇವರ ಪರೋಪಕಾರಾಯ ಪುಣ್ಯಾಯ ಎಂಬ ಕಾರ್ಯಕ್ರಮದಡಿಯಲ್ಲಿ ಅಷ್ಟಮಿ ಹಾಗೂ ನವರಾತ್ರಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಮೊತ್ತದ ವಿತರಣಾ ಸಮಾರಂಭ ದುಗ್ಲಿಪದವು ಸಮುದಾಯ ಭವನದಲ್ಲಿ ನಡೆಯಿತು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕ ಹರ್ಪಿತ್ ಚಿಕಿತ್ಸೆಗಾಗಿ ಹಾಗೂ ಇತರ ಮೂವರಿಗೆ ಸಂಗ್ರಹಿಸಿದ 2.42ಲಕ್ಷ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು.

ಇದೇ ಸಂದರ್ಭದಲ್ಲಿ ಉಚಿತ ರಕ್ತದಾನ ಹಾಗೂ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಚಂದ್ರಶೇಖರ್ ಶೇರಿಗಾರ್, ಕಸಾಪ ಉಡುಪಿ ಅಧ್ಯಕ್ಷ ರವಿರಾಜ್ ಎಚ್.ಪಿ., ಉದ್ಯಮಿ ಸುಭಾಷ್ ಎಂ.ಸಾಲ್ಯಾನ್, ಮಾಹೆಯ ಪ್ರಜಾಪತಿ, ಗ್ರಾಪಂ ಸದಸ್ಯ ಶಬರೀಶ್, ಪ್ರವೀಣ್ ಪೂಜಾರಿ, ಸುಮತಿ ಶೇರಿಗಾರ್, ಶಾಂತರಾಮ ಶೆಟ್ಟಿ, ಡಾ.ಇಂದಿರಾ ಪೈ, ಸುಕನ್ಯಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು
ಸ್ಥಾಪಕ ಅಧ್ಯಕ್ಷ ವಿನೋದ್ ಮಂಚಿ ಪ್ರಾಸ್ತಾವಿಕ ಮಾತನಾಡಿದರು. ರವೀಶ್ ರಾಜ್ ಸ್ವಾಗತಿಸಿದರು‌. ಕಾರ್ಯದರ್ಶಿ ಶ್ರೀಶ ಆಚಾರ್ಯ ವಂದಿಸಿದರು. ಮಹೇಶ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.