ಉಡುಪಿ: ಕಾರ್ಮಿಯ ಇಲಾಖೆಯು ದಿನಪತ್ರಿಕೆ ವಿತರಕ ಕಾರ್ಮಿಕರಿಗೆ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಇ-ಶ್ರಮ್ ನಲ್ಲಿ ನೋಂದಣಿಯಾದ ದಿನಪತ್ರಿಕೆ ವಿತರಕ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
16 ರಿಂದ 59 ವರ್ಷದೊಳಗಿನ ದಿನಪತ್ರಿಕೆ ವಿತರಕ ಕಾರ್ಮಿಕರು ಇದುವರೆಗೂ ಇ-ಶ್ರಮ್ ನಲ್ಲಿ ನ್ಯೂಸ್ ಪೇಪರ್ ಬಾಯ್ ಎಂದು ನೋಂದಣಿ ಮಾಡದೇ ಇದ್ದರೆ, ಈ ಕೂಡಲೇ ಇ-ಶ್ರಮ್ ಪೋರ್ಟಲ್ www.eshram.gov.in ನಲ್ಲಿ ಸ್ವಯಂ ಆಗಿ ಅಥವಾ ಹತ್ತಿರದ ಸೇವಾ ಕೇಂದ್ರಗಳಲ್ಲಿ ನೋಂದಾಯಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು.
ಜಿಲ್ಲೆಯಲ್ಲಿ ವಿಶೇಷ ಇ-ಶ್ರಮ್ ನೋಂದಣಿ ಕ್ಯಾಂಪ್‌ಗಳನ್ನು ಡಿಸೆಂಬರ್ 28 ಮತ್ತು 30 ರಂದು ಜಿಲ್ಲಾ ಕೇಂದ್ರ ಸ್ಥಾನದ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಹಾಗೂ 2024 ರ ಜನವರಿ 3 ರಂದು ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಕಾರ್ಮಿಕ ನಿರೀಕ್ಷಕರಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ದಿನಪತ್ರಿಕೆ ವಿತರಕ ಕಾರ್ಮಿಕರು ವಿಶೇಷ ನೋಂದಣಿ ಕ್ಯಾಂಪ್‌ನಲ್ಲಿ ಭಾಗವಹಿಸಿ ಇ-ಶ್ರಮ್ ನಲ್ಲಿ ನೋಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ 155214 (24*7), ಕಾರ್ಮಿಕ ಅಧಿಕಾರಿಗಳು ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು/ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.