ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಜೈಲಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಡಾಮಂಡಲಗೊಂಡಿದ್ದಾರೆ.
ಬೇರೆಡೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಸೂಚನೆ:
ಪ್ರಸ್ತುತ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಹಾಗೂ ದರ್ಶನ್ ಮತ್ತು ಅವರ ಸಹಚರರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಕಾರಾಗೃಹಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಡಿಜಿಪಿಗೂ ಸೂಚಿಸಿದ್ದಾರೆ.
ಜೈಲರ್‌ಗಳು ಸೇರಿದಂತೆ ಏಳು ಸಿಬ್ಬಂದಿಗಳು ಅಮಾನತು:
ಈ ಮಧ್ಯೆ, ನಟ ದರ್ಶನ್‌ಗೆ ಜೈಲಿನೊಳಗೆ ಸಿಗರೇಟ್ ಸೇದಲು ಮತ್ತು ಕಾಫಿ ಕುಡಿಯಲು ಅವಕಾಶ ನೀಡಿದ ಇಬ್ಬರು ಜೈಲರ್‌ಗಳು ಸೇರಿದಂತೆ ಏಳು ಸಿಬ್ಬಂದಿಯನ್ನು ಕಾರಾಗೃಹ ಇಲಾಖೆ ಅಮಾನತುಗೊಳಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ ಅವರು ಸೋಮವಾರ ಈ ವಿಚಾರವನ್ನು ತಿಳಿಸಿದರು.
ದರ್ಶನ್ ತಮ್ಮ ಬ್ಯಾರಕ್‌ನ ಹೊರಗೆ ಕುರ್ಚಿಯ ಮೇಲೆ ಕುಳಿತು ಒಂದು ಕೈಯಲ್ಲಿ ಸಿಗರೇಟ್ ಮತ್ತು ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದುಕೊಂಡಿರುವ ಫೋಟೋ ಭಾನುವಾರ ವೈರಲ್ ಆಗಿತ್ತು. ಫೋಟೋದಲ್ಲಿ, ದರ್ಶನ್ ಅವರ ಮ್ಯಾನೇಜರ್ ಮತ್ತು ಇತರ ಇಬ್ಬರು ಜೈಲು ಕೈದಿಗಳು ಕೂಡ ಅವರೊಂದಿಗೆ ಕುಳಿತಿರುವುದು ಕಂಡು ಬಂದಿತ್ತು.
ಈ ಬೆಳವಣಿಗೆಯು ಹಲವರ ಹುಬ್ಬೇರುವಂತೆ ಮಾಡಿದ್ದು, ಕಾರಾಗೃಹ ಇಲಾಖೆಯಲ್ಲಿನ ಕಾರ್ಯನಿರ್ವಹಣೆ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳು ಹುಟ್ಟುಹಾಕಿವೆ. ಘಟನೆಯ ಬೆನ್ನಲ್ಲೇ ಕಾರಾಗೃಹಗಳ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಧ್ಯರಾತ್ರಿ 1 ಗಂಟೆಯವರೆಗೆ ವಿಚಾರಣೆ ನಡೆಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ, ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ವರದಿ ಬಂದ ತಕ್ಷಣ ಜೈಲು ಅಧೀಕ್ಷಕರನ್ನು ವರ್ಗಾವಣೆ ಮಾಡಲಾಗುವುದು ಎಂದರು. ಹಿರಿಯ ಅಧಿಕಾರಿಗಳ ಶಾಮೀಲು ಕಂಡುಬಂದಲ್ಲಿ ಯಾವುದೇ ಹಿಂಜರಿಕೆ ಮತ್ತು ಕರುಣೆ ಇಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜೈಲರ್ ಗಳಾದ ಶರಣ ಬಸವ ಅಮೀನಗಡ, ಪ್ರಭು ಎಸ್.ಖಂಡೇಲವಾಲ್, ಸಹಾಯಕ ಜೈಲರ್ ಎಲ್.ಎಸ್. ತಿಪ್ಪೆ ಸ್ವಾಮಿ ಮತ್ತು ಶ್ರೀಕಾಂತ ತಳವಾರ, ಹೆಡ್ ವಾರ್ಡನ್ ವೆಂಕಟಪ್ಪ ಮೂರ್ತಿ, ವಾರ್ಡನ್ ಬಸಪ್ಪ ತೇಲಿ ಮತ್ತು ಹೆಡ್ ವಾರ್ಡನ್ ವೆಂಕಟಪ್ಪ ಕಟ್ಟೋಳಿ ಮತ್ತು ಸಂಪತ್ ಕುಮಾರ್ ಕಡಪಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.












