ತೆಕ್ಕಟ್ಟೆ ಮೂಕ ಹ್ಯಾಗುಳಿ ದೈವದ ದರ್ಶನ: ಭಕ್ತರಿಂದ 500 ಅಟ್ಟೆ ಮಲ್ಲಿಗೆ ಸಮರ್ಪಣೆ

ಉಡುಪಿ: ಕರಾವಳಿ ಎಂದರೆ ಅದು ದೈವ ದೇವರುಗಳ ಸಮಾಗಮವಿರುವ ಸ್ಥಳ. ಇದರ ಜೊತೆ ಇಲ್ಲಿನ ಒಂದೊಂದು ಆಚರಣೆಗಳು ಕೂಡ ವಿಶೇಷ ಮತ್ತು ವಿಶಿಷ್ಟ. ಸದ್ಯ ಇಂತಹದೆ ಒಂದು ವಿಶಿಷ್ಟವಾದ ಆಚರಣೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೂಕ ಹ್ಯಾಗುಳಿ ದೈವದ ದರ್ಶನ ಸೇವೆಯ ದೃಶ್ಯ ಸದ್ಯ ವೈರಲ್ ಆಗಿದೆ. ತೆಕ್ಕಟ್ಟೆಯ ಮೂಕ ಹ್ಯಾಗುಳಿ ದೈವಕ್ಕೆ ಮಲ್ಲಿಗೆ ಪ್ರಿಯವಾದುದು. ಆದ್ದರಿಂದ ನಂಬಿದ ಭಕ್ತರು ಮಲ್ಲಿಗೆ ಹೂವನ್ನು ಸಮರ್ಪಿಸುವ ಸಂಪ್ರದಾಯವಿದೆ.

ಈ ಬಾರಿ ದೈವದ ದರ್ಶನ ಸೇವೆಯ ಸಂದರ್ಭ ಸುಮಾರು 500 ಅಟ್ಟೆ ಅಂದರೆ ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಮಲ್ಲಿಗೆ ಹೂವವನ್ನು ದೇವರಿಗೆ ಸಮರ್ಪಣೆ ಮಾಡಿದ್ದಾರೆ. ಇನ್ನು ದರ್ಶನ ಎಂದಾಕ್ಷಣ ಸಿಂಗಾರ ಹೂವಿನ ಕಲ್ಪನೆಯಲ್ಲಿರುವ ಬಹುತೇಕರಿಗೆ ಈ ಮಲ್ಲಿಗೆ ಹೂವಿನ ದರ್ಶನ ಸೇವೆ ಅಪರೂಪ ಎನ್ನಬಹುದು.

ಇನ್ನು ಇಲ್ಲಿನ ಮೂಕ ಹ್ಯಾಗುಳಿ ದೈವ ಪಾತ್ರಿ ಮಂಜುನಾಥ ಅವರ ದೈವ ಅವೇಶವಾಗುವ ಸಂದರ್ಭದಲ್ಲಿ ಯಾವುದೇ ನುಡಿ ನೀಡುವುದಿಲ್ಲ. ಇದು ಇಲ್ಲಿನ ಅತೀ ದೊಡ್ಡ ವಿಶೇಷಗಳಲ್ಲಿ ಒಂದು. ಸದ್ಯ ದೈವ ದರ್ಶನ ಸೇವೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.