ಡಿ.23ರಂದು ‘ಅಮೃತ ಸಂಗಮ’ ಎಂಜಿಎಂ ಕಾಲೇಜಿನ ಹಳೆವಿದ್ಯಾರ್ಥಿಗಳ ಸಮಾವೇಶ

ಉಡುಪಿ: ಉಡುಪಿ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವದ ಪ್ರಯುಕ್ತ ‘ಅಮೃತ ಸಂಗಮ’ ಹಳೆವಿದ್ಯಾರ್ಥಿಗಳ ಸಮಾವೇಶವನ್ನು ಇದೇ ಡಿ.23ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಪ್ರಧಾನ ಸಂಘಟಕ ಪ್ರೊ.ಎಂ.ಎಲ್.ಸಾಮಗ ತಿಳಿಸಿದ್ದಾರೆ.

ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ಸ್ಥಾಪನೆಗೊಂಡ 1949ರಿಂದ ಇದುವರೆಗಿನ ಎಲ್ಲಾ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಒಂದು ದಿನದ ಸಂಭ್ರಮ, ಸಡಗರವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಿದ್ದಾರೆ ಎಂದರು.

ಡಿ. 23ರಂದು ಬೆಳಿಗ್ಗೆ 9:30ಕ್ಕೆ ಡಾ.ಟಿಎಂಎ ಪೈ ಪುತ್ಥಳಿಗೆ ಗೌರವಾರ್ಪಣೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಳಿಕ 10ಗಂಟೆಗೆ ಹಳೆ ವಿದ್ಯಾರ್ಥಿಗಳ ಕಾಲೇಜು ಬದುಕನ್ನು ನೆನಪಿಸುವ ಪೋಟೊ ಗ್ಯಾಲರಿ ಪ್ರದರ್ಶನ ಹಾಗೂ ಅಮೃತ ಸಂಗಮದ ಉದ್ಘಾಟನೆ ನಡೆಯಲಿದೆ. ಸುಮಾರು 5000 ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು‌ ತಿಳಿಸಿದರು.

ಮಧ್ಯಾಹ್ನ 2:30ಕ್ಕೆ ಮುದ್ದಣ ಮಂಟಪದಲ್ಲಿ ಹಳೆ ವಿದ್ಯಾರ್ಥಿಗಳ ಅಮೃತ ಸಂಗಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ನಿವೃತ್ತ ಪ್ರಾಧ್ಯಾಪಕರು ಹಾಗೂ ನಿವೃತ್ತ ಶಿಕ್ಷಕೇತರ ಸಿಬ್ಬಂದಿಗಳನ್ನು ಹಾಗೂ 1949ರಿಂದ 1970ರ ಅವಧಿಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಬಳಿಕ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಗೋಷ್ಠಿಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್‌ನ ವಿಶ್ವಸ್ಥ ಬಿ.ಪಿ. ವರದರಾಯ ಪ್ರಭು, ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಎಂಜಿಎಂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಕಾರ್ಯದರ್ಶಿ ಡಾ.ಎಂ.ವಿಶ್ವನಾಥ ಪೈ, ಕೋಶಾಧಿಕಾರಿ ದೀಪಾಲಿ ಕಾಮತ್ ಉಪಸ್ಥಿತರಿದ್ದರು.