ಡಯಾನ- ಕುಕ್ಕಿಕಟ್ಟೆ ರಸ್ತೆಯಲ್ಲಿ ಮರಣ ಗುಂಡಿ; ಸ್ವಲ್ಪ ಎಡವಿದ್ರೂ ಮಸಣ ಸೇರುದಂತೂ ಗ್ಯಾರಂಟಿ!

ಉಡುಪಿ: ಈ ರಸ್ತೆಯಲ್ಲಿ ಪ್ರಯಾಣಿಸುವುದು ಎಂದರೆ ಸಾವಿಗೆ ಆಹ್ವಾನ ಕೊಟ್ಟಂತೆ. ಜೀವದ ಆಸೆಯನ್ನೆ ಬಿಟ್ಟುಬಿಡಬೇಕು. ಮನೆಗೆ ತಲುಪುತ್ತೇವೆ ಎಂಬ ಗ್ಯಾರಂಟಿ ಅಂತೂ ಇಲ್ಲವೇ ಇಲ್ಲ. ಇದು ಡಯಾನ- ಕುಕ್ಕಿಕಟ್ಟೆ ರಸ್ತೆಯ ನರಕ ದರ್ಶನ.

ಹೌದು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಡಯಾನ-ಕುಕ್ಕಿಕಟ್ಟೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಯ ಮಧ್ಯೆ ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ನಿತ್ಯ ಸರ್ಕಸ್ ಮಾಡಿಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಎಡವಿದ್ರೂ ಆಸ್ಪತ್ರೆ ಅಥವಾ ಮಸಣ ಸೇರುದಂತೂ ಗ್ಯಾರಂಟಿ. ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು, ಕೈ ಕಾಲು ಮುರಿದುಕೊಂಡಿದ್ದಾರೆ. ಇಷ್ಟೆಲ್ಲ ಅವಘಡ, ಅನಾಹುತ ಸಂಭವಿಸುತ್ತಿದ್ದರೂ ರಸ್ತೆ ಮಾತ್ರ ದುರಸ್ತಿ ಭಾಗ್ಯ ಕಾಣುತ್ತಿಲ್ಲ. ರಸ್ತೆ ಹಾಳಾಗಿ ಹಲವು ತಿಂಗಳೇ ಕಳೆದರೂ ಉಡುಪಿ ನಗರಸಭೆ ಮಾತ್ರ ಕಣ್ಣುಮುಚ್ಚಿಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಗೆ ಸಮರ್ಪಕವಾದ ಚರಂಡಿ ವ್ಯವಸ್ಥೆ ಕೂಡ ಇಲ್ಲ. ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಹೊಂಡ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಸಂಚರಿಸಲಾಗದ ಪರಿಸ್ಥಿತಿ ಉದ್ಭವಿಸಿದೆ. ನಗರಸಭೆ ಅರ್ಧಂಬರ್ಧ ಚರಂಡಿ ಕಾಮಗಾರಿ ನಡೆಸಿ ಲಕ್ಷಾಂತರ ರೂ. ಕೊಳ್ಳೆ ಹೊಡೆದಿದೆ ಎಂಬ ಆರೋಪವು ಕೇಳಿಬಂದಿದೆ.

ಒಟ್ಟಿನಲ್ಲಿ ಸಂಪೂರ್ಣ ಹೊಂಡ ಮಯವಾದ ಈ ರಸ್ತೆಯಲ್ಲಿ ಸಂಚಾರ ಅಂತೂ ಸಾವಿನ ಮೇಲಿನ ನಡಿಗೆ ಆಗಿದೆ. ನಗರಸಭೆ ಕೂಡಲೇ ಎಚ್ಚೆತ್ತುಕೊಂಡು ತಾತ್ಕಾಲಿಕ ದುರಸ್ತಿ ಕಾರ್ಯವಾದರೂ ಮಾಡಬೇಕು. ಇಲ್ಲದಿದ್ದರೆ ಈ ರಸ್ತೆಯಲ್ಲಿ ಪ್ರಯಾಣಿಸುವವರನ್ನು ದೇವರೇ ಕಾಪಾಡಬೇಕು.