ಉಡುಪಿ: ಸಂವಿಧಾನ ತಿದ್ದುಪಡಿ ಮಾಡಲು ಕಾಂಗ್ರೆಸ್ ಸರಕಾರಕ್ಕಿದ್ದ ದುರುದ್ದೇಶ ಹಾಗು ಸಾರ್ವಜನಿಕರ ಹಿತಾಸಕ್ತಿಗಾಗಿ ಬಿಜೆಪಿ ಸರಕಾರ ಮಾಡಿರುವ ತಿದ್ದುಪಡಿಗಳ ಕುರಿತು ಬೆಳಕು ಚೆಲ್ಲುವ ಸಲುವಾಗಿ ಸಿಟಿಜನ್ ಫಾರ್ ಸೋಶಿಯಲ್ ಜಸ್ಟಿಸ್ ಮತ್ತು ದಲಿತ ಹಿಂದುಳಿದ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ಜ.11ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿಯ ಪುರಭವನದಲ್ಲಿ ಸಂವಿಧಾನ ಸಮ್ಮಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂವಿಧಾನ ಸಮ್ಮಾನ ಸಮಿತಿಯ ವಿಭಾಗ ಸಂಚಾಲಕರಾದ ಕೆ. ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1949 ನವೆಂಬರ್ 26ರಂದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನ ಸಂಸತ್ತಿನಲ್ಲಿ ಅಂಗೀಕಾರವಾದ ದಿನ.
2015ರಿಂದ ಆ ದಿನವನ್ನು ಸಂವಿಧಾನ ದಿನವೆಂದು ಪ್ರಧಾನಿ ಮೋದಿ ಘೋಷಣೆ ಮಾಡಿ ಆಚರಣೆಗೆ ತಂದರು. ಸಂವಿಧಾನ ರಕ್ಷಕರೆಂದು ಬೊಬ್ಬಿಡುವ ಕಾಂಗ್ರೆಸ್ ಪಕ್ಷ ಸಂವಿಧಾನ ವಿರೋಧಿಯಾಗಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿ ಕೆಲಸ ಮಾಡಿದೆ ಎಂಬ ಸತ್ಯ ಸಂಗತಿಯನ್ನು ಜನರ ಮುಂದಿಡುವ ಸಲುವಾಗಿ ನವೆಂಬರ್ 26 ರಿಂದ ಜನವರಿ 26 ರವರೆಗೆ 2 ತಿಂಗಳ ಕಾಲ ರಾಜ್ಯಾದ್ಯಂತ ಸಂವಿಧಾನ ಸಮ್ಮಾನ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕಿ ರೇಷ್ಮಾ ಉದಯ್ ಶೆಟ್ಟಿ, ಸದಸ್ಯರಾದ ಶ್ರೀಕಾಂತ್ ನಾಯಕ್, ರತ್ನಾಕರ್ ಇಂದ್ರಾಳಿ, ಚಂದ್ರ ಪಂಚವಟಿ ಉಪಸ್ಥಿತರಿದ್ದರು.