ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನವು ಕರಾವಳಿಯ ಸಂಗೀತಾಸಕ್ತರಿಗೆ ಮತ್ತೊಂದು ರಸದೌತಣವನ್ನು ಆಯೋಜಿಸಿದೆ. ಸಂಗೀತ
ಪ್ರಿಯರ ಬಹುನಿರೀಕ್ಷಿತ, ಕಳೆದ ಐದು ಆವೃತ್ತಿಗಳಲ್ಲಿ ಯಶಸ್ವಿಯಾಗಿದ್ದ ಬೋಲಾವ
ವಿಠಲ ಮತ್ತು ಸಂಗೀತ ಕಾರ್ಯಕ್ರಮ ಈ ವರ್ಷ ಜು. 21ರoದು ಸಂಜೆ 5ರಿಂದ ಪುರಭವನದಲ್ಲಿ ನಡೆಯಲಿದೆ. ಹಿರಿಯ ದಿಗ್ಗಜ ಕಲಾವಿದೆ ಸಂಗೀತ ಕಟ್ಟಿ ಕುಲಕರ್ಣಿ ಮತ್ತು ಜೀ ಮರಾಠಿ ಸರಿಗಮಪ ಸಂಗೀತ ಸ್ಪರ್ಧೆಯ ಫೈನಲಿಸ್ಟ್ ಮುಗ್ಧ ವೈಶಂಪಾಯನ ಹಾಗೂ ಪ್ರಥಮೇಶ ಲಘಾಟೆ ಅವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ. ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ 2018, 2019, 2021, 2022 ಮತ್ತು 2023ರ ಆವೃತ್ತಿಗಳು ನಗರದ ಪುರಭವನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ನಡೆದಿತ್ತು. ಸುಮಾರು ಮೂರೂವರೆ ಗಂಟೆ ಅಂದರೆ ಹಾಡುಗಾರಿಕೆ ಮುಗಿಯುವವರೆಗೂ ಪ್ರೇಕ್ಷಕರು ತುಟಿ ಪುಟಿಕ್ ಎನ್ನದೆ ಕುಳಿತ ಜಾಗದಿಂದ ಕದಲಲಿಲ್ಲ. ಮೂರು ಗಂಟೆಗಳ ಸಮಯ ನಿಗದಿಪಡಿಸಿದ್ದರೂ, ಕಲಾಸಕ್ತರ ಆಸಕ್ತಿಯಿಂದ ಪ್ರೇರಿತರಾದ ಕಲಾವಿದರು ಮೂರೂವರೆ ಗಂಟೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಕಲಾವಿದರೂ ಮಂಗಳ ಹಾಡಿದರು. ಇದೀಗ ಮತ್ತೊಮ್ಮೆ ಅಂತಹ ಶ್ರೇಷ್ಠ ಸಂಗೀತಕ್ಕಾಗಿ ವೇದಿಕೆ ಸಿದ್ಧವಾಗಿದೆ. ಅದೇ ಕಾರ್ಯಕ್ರಮ, ಅದೇ ಪರಿಕಲ್ಪನೆ, ಅದೇ ಉದ್ದೇಶ. ಆದರೆ ಈ ಬಾರಿ ಬದಲಾವಣೆ ಎಂದರೆ ಕಲಾವಿದರು ಮಾತ್ರ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಹಿಂದೂಸ್ಥಾನಿ ಸಂಗೀತದ ಶ್ರೇಷ್ಠ ಕಲಾವಿದರಾದ ಬೆಂಗಳೂರಿನ ಸಂಗೀತ ಕಟ್ಟಿ ಕುಲಕರ್ಣಿ, ಮುಗ್ಧ ವೈಶಂಪಾಯನ ಮತ್ತು ಪ್ರಥಮೇಶ ಲಘಾಟೆ ಅವರ ಹಾಡುಗಾರಿಕೆಗೆ ತಬ್ಲಾದಲ್ಲಿ ಪ್ರಸಾದ್ ಪಾದ್ಯೆ, ಪಕ್ವಾಜ್ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ ಸುರ್ವೆ, ಹಾರ್ಮೋನಿಯಂನಲ್ಲಿ ಆದಿತ್ಯ ಒಕೆ, ಕೊಳಲಿನಲ್ಲಿ ಶಡಜ್ ಗೋಡ್ಕಿಂಡಿ ಸಾಥ್ ನೀಡಲಿದ್ದಾರೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ. ದೇಶದ ಹಲವು ಶ್ರೇಷ್ಠ ಸಂಗೀತ ಕಾರ್ಯಕ್ರಮ ಗಳನ್ನು ಆಯೋಜಿಸಿರುವ ಮುಂಬಯಿಯ ಪಂಚಮ್ ನಿಶಾದ್ ಸಂಸ್ಥೆಯ ಅಭೂತಪೂರ್ವ ಪರಿಕಲ್ಪನೆಯ ಕಾರ್ಯಕ್ರಮ ವಾಗಿರುವ
ಬೋಲಾವ ವಿಠಲ’ ವಿನೂತನ ಸಂತವಾಣಿ ಕಾರ್ಯಕ್ರಮವಾಗಿದೆ.
ಪಾಸ್ ದೊರೆಯುವ ಸ್ಥಳ:
ಬೋಲಾವ ವಿಠಲ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಸಂಗೀತಾಸಕ್ತರು ನಗರದ ಕೊಡಿಯಾಲ್ ಬೈಲ್ನಲ್ಲಿರುವ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನಿಂದ ಪಾಸ್ ಅನ್ನು ಶನಿವಾರದಿಂದ ಪಡೆದುಕೊಳ್ಳಬಹುದು. ಪಾಸ್ ಹೊಂದಿರುವವರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ಏನಿದು ಬೋಲಾವ ವಿಠಲ?
ಪಂಚಮ್ ನಿಶಾದ್ ಸಂಸ್ಥೆಯು ಆಷಾಢ ಮಾಸದಲ್ಲಿ `ಬೋಲಾವ ವಿಠಲ’ ಶೀರ್ಷಿಕೆಯಡಿ ಪುಣೆ, ಮುಂಬಯಿ, ಹೊಸದಿಲ್ಲಿ, ಗೋವಾ, ಕೋಲ್ಕೊತಾ, ಬೆಂಗಳೂರು ಅಲ್ಲದೆ ದೇಶದ ನಾನಾ ಪ್ರಮುಖ ನಗರಗಳಲ್ಲಿ ಕಳೆದ ಹಲವು ದಶಕಗಳಿಂದ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ನಗರವಾಸಿಗಳಿಗೆ ಸಂಗೀತದ ಶ್ರೇಷ್ಠತೆ ಪರಿಚಯಿಸಿದ ಬೋಲಾವ ವಿಠಲ್ ತಂಡವನ್ನು 2018ರಿಂದ ಸಂಗೀತ ಭಾರತಿ ಪ್ರತಿಷ್ಠಾನ ಪರಿಚಯಿಸಿತು. ಇದೀಗ ಮುಂದುವರಿದ ಭಾಗವಾಗಿ ಈ ವರ್ಷವೂ ಕಾರ್ಯಕ್ರಮ ಆಯೋಜಿಸುತ್ತಿದೆ.
ಅಭಂಗ್ ಮೂಲಕ ಆರಾಧನೆ :
ಪಾಂಡುರಂಗನಿಗೆ ಅಭಂಗ್ ರೂಪದಲ್ಲಿ ಆರಾಧನೆ ಶ್ರೇಷ್ಠ.ಪಂಡರಾಪುರದಲ್ಲಿ ಪ್ರತಿದಿನ ಇಂತಹ ಆರಾಧನೆಗಳು ನಡೆಯುತ್ತಿರುತ್ತವೆ. ಆದರೆ ಎಲ್ಲರಿಗೂ ಪಂಡರಾಪುರಕ್ಕೆ ಹೋಗಿ ಆರಾಧನೆ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಭಕ್ತಿ ಒಂದೆಡೆಯಾದರೆ, ಪ್ರತಿಭೆಯ ಅನಾವರಣ ಇನ್ನೊಂದೆಡೆ. ನಿಯಮಿತ ಕಾಲಮಿತಿಯನ್ನು ಕಲಾವಿದರು ತಮ್ಮ ಶ್ರೇಷ್ಠತೆಯನ್ನು ಅನಾವರಣ ಗೊಳಿಸಲಿದ್ದಾರೆ. ಇದರಿಂದಾಗಿ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಗೀತಪ್ರಿಯರಿಗೆ ವಿಭಿನ್ನ ಮಾದರಿಯ ಕಾರ್ಯಕ್ರಮ ಕೇಳಲು ಅವಕಾಶವಾಗಿದೆ ಎನ್ನುತ್ತಾರೆ ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೋ.ನರೇಂದ್ರ ಎಲ್.ನಾಯಕ್.